ತಾಳಿಕೋಟೆಯಲ್ಲಿ ಜ್ಞಾನ ಕುಸುಮ ಸಿದ್ದೇಶ್ವರಶ್ರೀಗಳಿಗೆ ಶ್ರದ್ದಾಂಜಲಿ

ತಾಳಿಕೋಟೆ:ಜ.4:ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾ ಸ್ವಾಮಿಗಳು ಲಿಂಗೈಕ್ಯರಾಗಿರುವ ಸುದ್ದಿ ಬರಸಿಡಿಲಿನಂತೆ ಬಡೆಯುತ್ತಿದ್ದಂತೆ ತಾಳಿಕೋಟೆ ಭಾಗದ ಎಲ್ಲ ಜನತೆ ನಿರವ ಮೌನಕ್ಕೆ ಒಳಗಾಗಿದ್ದಲ್ಲದೇ ಬೆಳಗಿನಿಂದಲೂ ಇಡೀ ದಿನಪೂರ್ತಿ ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ವಿವಿಧ ಭಾಗಗಳಲ್ಲಿ ಶ್ರದ್ದಾಂಜಲಿ ಸಭೆಗಳನ್ನು ಆಯೋಜಿಸಿ ಅವರಿಗೆ ಭಕ್ತಿಯನ್ನು ಸಮರ್ಪಿಸಿದರು.
ಪಟ್ಟಣದ ಬಹುತೇಕ ಜನರು ಸಿದ್ದೇಶ್ವರಶ್ರೀಗಳ ದರ್ಶನಕ್ಕೆ ವಿಜಯಪುರಕ್ಕೆ ತೆರಳಿದ್ದರಿಂದ ಬಹುತೇಕ ಎಲ್ಲ ರಸ್ತೆಗಳು ಬಿಕೋ ಎನ್ನುತ್ತಿದ್ದವಲ್ಲದೇ ಇಡೀ ಪಟ್ಟಣವೇ ನಿರವ ಮೌನಕ್ಕೆ ಶರಣಾದಂತೆ ಭಾಸವಾಗುತ್ತಿತ್ತು ಪಟ್ಟಣದ ಅಡತ್ ಮರ್ಚಂಟ್ ಅಸೋಶಿಯಶನ್ ವತಿಯಿಂದ ಎಪಿಎಂಸಿಯ ಸಭಾ ಭವನದ ಮುಂದುಗಡೆ ಶ್ರದ್ದಾಂಜಲಿ ಸಭೆ ಆಯೋಜಿಸುವದರೊಂದಿಗೆ ನೂರಾರು ಜನರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಿ ಭಕ್ತಿಯನ್ನು ಸಮರ್ಪಿಸಿದರು.
ಇದು ಅಲ್ಲದೇ ಪಟ್ಟಣದ ವಚನ ಸಾಹಿತ್ಯ ಪರಿಷತ್ ವತಿಯಿಂದ ಶ್ರೀ ವಿಠ್ಠಲ ಮಂದಿರದ ಮುಂದುಗಡೆ, ವಿಶ್ವಕರ್ಮ ಸಮಾಜಬಾಂದವರ ವತಿಯಿಂದ ಶ್ರೀ ಕಾಳಿಕಾದೇವಿ ಮಂದಿರದ ಸಭಾ ಭವನದಲ್ಲಿ, ಬಣಜಗ ಸಮಾಜದಿಂದ ಕತ್ರಿ ಬಜಾರದಲ್ಲಿ, ರಾಜವಾಡೆಯ ಸಮಸ್ತ ನಾಗರಿಕರ ವತಿಯಿಂದ ರಾಜವಾಡೆಯ ಮೈದಾನದಲ್ಲಿ, ಹಾಗೂ ಬ್ರಾಹ್ಮಣ ಸಮಾಜ, ಸಜ್ಜನ ಸಮಾಜದ ವತಿಯಿಂದ ಮತ್ತು ಹರಳಯ್ಯ ಸಮಾಜ ಅಲ್ಲದೇ ಇನ್ನಿತರ ಸಮಾಜದ ಬಂದುಗಳು ಪ್ರತ್ಯೇಕವಾಗಿ ಶ್ರದ್ದಾಂಜಲಿ ಸಭೆಗಳನ್ನು ನಡೆಸಿ ಸಿದ್ದೇಶ್ವರಶ್ರೀಗಳಿಗೆ ನುಡಿ ನಮನ ಸಲ್ಲಿಸಿದರು.
ಪಟ್ಟಣದ ಲಕ್ಷ್ಮೀ ಕ್ಲಾಥ್ ಸ್ಟೋರ್ಸ್‍ನ ನೂರಾರು ಸಿಬ್ಬಂದಿಗಳು ಶ್ರೀ ಸಿದ್ದೇಶ್ವರಶ್ರೀಗಳ ಭಾವಚಿತ್ರವನ್ನು ಪಟ್ಟಣದಲ್ಲಿ ಮೆರವಣಿಗೆಯ ಮೂಲಕ ತಾಳಿಕೋಟೆ ನಾಗರಿಕರ ವತಿಯಿಂದ ಶ್ರೀ ನಿಮಿಷಾಂಭಾದೇವಿ ಮಂದಿರದ ಮುಂದುಗಡೆ ಆಯೋಜಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿದರು.
ಈ ಶ್ರದ್ದಾಂಜಲಿ ಸಭೆಯಲ್ಲಿ ಯಾವುದೇ ಜಾತಿ, ಧರ್ಮ, ಬೇದಭಾವವಿಲ್ಲದೇ ಎಲ್ಲ ಧರ್ಮಿಯರೂ ಒಗ್ಗೂಡಿ ಸಿದ್ದೇಶ್ವರ ಶ್ರೀಗಳನ್ನು ಕೊಂಡಾಡಿದರಲ್ಲದೇ ಅವರಿಗೆ ಪುಷ್ಪಾರ್ಚನೆಯ ಮೂಲಕ ಶ್ರದ್ದಾಂಜಲಿ ಸಲ್ಲಿಸಿದರು.
ಈ ಸಮಯದಲ್ಲಿ ರಾಜಕೀಯ ಮುಖಂಡರುಗಳು, ಪ್ರಮುಖರು, ಸಾಹಿತಿಗಳು, ಶಿಕ್ಷಕ ವೃಂದದವರು, ಗಣ್ಯವರ್ತಕರು, ಪಾಲ್ಗೊಂಡಿದ್ದರು.