ತಾಳಿಕೋಟಿ ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ಭೇಟಿ:ವಿವಿಧ ಕಾಮಗಾರಿ ಪರಿಶೀಲನೆ ನಡೆಸಿದ ಜಿಪಂ ಸಿಇಓ ರಾಹುಲ್ ಶಿಂಧೆ

ವಿಜಯಪುರ:ಮೇ.19: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಾಹುಲ್ ಶಿಂಧೆ ಅವರು ತಾಳಿಕೋಟೆ ತಾಲೂಕಿನ ಹಲವು ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ, ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮ ಪಂಚಾಯಿತಿಯ ಸದಸ್ಯರೊಂದಿಗೆ ಸಭೆ ನಡೆಸಿ ಗ್ರಾವiದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ನಡೆಸಿದರು. ನರೇಗಾ ಯೋಜನೆಯಲ್ಲಿ ಹೆಚ್ಚಿಗೆ ಕೂಲಿಯಾಧಾರಿತ ಕಾಮಗಾರಿಗಳನ್ನು ಆರ್ಥಿಕ ವರ್ಷದ ಆರಂಭದಲ್ಲಿ ಕೈಗೊಂಡಲ್ಲಿ ನಂತರದ ದಿನಗಳಲ್ಲಿ ಸಾಮಗ್ರಿ ಆಧಾರಿತ ಕಾಮಗಾರಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪರಿಶೀಲಿಸಲಾಗುವುದು. ನರೇಗಾ ಯೋಜನೆಯಲ್ಲಿ ಹೆಚ್ಚಿನ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮದ ನೈರ್ಮಲ್ಯ ಕುರಿತು ಹೆಚ್ಚಿನ ಕಾಳಜಿ ವಹಿಸಿ ಸ್ವಚ್ಛ ಗ್ರಾಮವನ್ನಾಗಿಸುವಲ್ಲಿ ಯೋಜನೆ ಸಿದ್ಧಪಡಿಸಿಕೊಂಡು ಕಾರ್ಯಗತಗೊಳಿಸಬೇಕು. ಗ್ರಾಮ ನೈರ್ಮಲ್ಯ ಕಾಪಾಡಿಕೊಳ್ಳುವ ಹೊಣೆ ಎಲ್ಲರದ್ದೂ ಆಗಿದೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ಬಿಂಜಲಭಾವಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಇಲ್ಲದಿರುವುದನ್ನು ಗ್ರಾಮಸ್ಥರಿಂದ ತಿಳಿದುಕೊಂಡ ಅವರು, ಕಟ್ಟಡ ನಿರ್ಮಾಣಕ್ಕೆ ಸ್ಥಳಾವಕಾಶ ಇದ್ದಲ್ಲಿ ಆದ್ಯತೆ ನೀಡಲಾಗುವುದು ಎಂದರು.
ಗ್ರಾಮ ಪಂಚಾಯತಿ ಅಭಿವೃದ್ಧಿಗೆ ತೆರಿಗೆ ವಸೂಲಾತಿ ಅತೀ ಪ್ರಮುಖವಾಗಿದ್ದು, ಕರ ವಸೂಲಿಯ ನಿಗದಿತ ಗುರಿ ತಲುಪಲು ಗ್ರಾಮ ಪಂಚಾಯತಿ ಸದಸ್ಯರು ಈ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಬೇಕು. ಗ್ರಾಮದ ಸವಾರ್ಂಗೀಣ ಅಭಿವೃದ್ಧಿಗೆ ಸಹಕಾರ ಅವಶ್ಯವಾಗಿದ್ದು, ಎಲ್ಲರೂ ಅತ್ಯಂತ ಸಹಕಾರದಿಂದ ಕಾರ್ಯ ನಿರ್ವಹಣೆ ಮಾಡಿ, ಗ್ರಾಮದ ಅಭಿವೃದ್ಧಿಗೆ ಆಧ್ಯತೆ ನೀಡುವಂತೆ ಗ್ರಾಮ ಪಂಚಾಯತಿ ಸದಸ್ಯರುಗಳಿಗೆ ರಾಹುಲ್ ಶಿಂಧೆ ತಿಳಿಸಿದರು.
ಅಸ್ಕಿ ಗ್ರಾಮ ಪಂಚಾಯತಿಯ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಕೂಲಿ ಕಾರ್ಮಿಕರೊಂದಿಗೆ ಸಮಾಲೋಚನೆ ನಡೆಸಿ, ಎಲ್ಲರೂ ಅತ್ಯಂತ ಉತ್ಸಾಹದಿಂದ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದು ನಿಜಕ್ಕೂ ಸಂತಸ ತಂದಿದೆ. ಅವಶ್ಯಕತೆ ಇರುವವರನ್ನು ಗುರುತಿಸಿ, ನರೇಗಾದಡಿ ಕೆಲಸ ನೀಡುವಂತೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಬೆಕಿನಾಳ ಗ್ರಾಮ ಪಂಚಾಯತಿಯ ಬನಹಟ್ಟಿ ಗ್ರಾಮದ ಪ್ರಾಥಮಿಕ ಶಾಲೆಯ ಹೈಟೆಕ್ ಶೌಚಾಲಯ ಮತ್ತು ಶಾಲಾ ಕಂಪೌಡ ಮತ್ತು ಅಡುಗೆ ಕೋಣೆ ಕಾಮಗಾರಿ ವೀಕ್ಷಿಸಿದರು. ಬೇಕಿನಾಳ ಗ್ರಾಮ ಪಂಚಾಯತ ಹೊಸ ಕಟ್ಟಡ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಎನ್.ಆರ್.ಎಲ್.ಎಮ್ ಶೆಡ್, ಬಾಪೂಜಿ ಸೇವಾ ಕೇಂದ್ರ ಮತ್ತು ಗ್ರಾಮೀಣ ಗೋದಾಮು ನಿರ್ಮಿಸುವಂತೆಯೂ ತಿಳಿಸಿದರು.
ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ಅರಣ್ಯ ವಿಭಾಗದಿಂದ ಬನಹಟ್ಟಿ ಪಿಟಿ ಗ್ರಾಮದ ಸರಕಾರಿ ಜಮೀನನಲ್ಲಿ 2022ನೇ ಸಾಲಿನ ಮಳೆಗಾಲದಲ್ಲಿ ಕೈಗೆತ್ತಿಕೊಂಡಿರುವ ನೆಡುತೋಪು ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಸರಕಾರಿ ಶಾಲೆಗಳಲ್ಲಿ ಮತ್ತು ಖಾಲಿ ಸರಕಾರಿ ಜಾಗದಲ್ಲಿ ಸಸಿ ನೆಡಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತಿಳಿಸಿದರು.
ಪ್ರಗತಿ ಪರಿಶೀಲನಾ ಸಭೆ:
ತಾಳಿಕೋಟಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಇಲಾಖೆ ಹಾಗೂ ತಾಲೂಕಿನ ಗ್ರಾಮ ಪಂಚಾಯತಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೈಗೊಳ್ಳುವ ಸಮುದಾಯ ಕಾಮಗಾರಿಗಳಲ್ಲಿ ಕನಿಷ್ಠ ಶೇ.60ರಷ್ಟು ಮಹಿಳೆಯರಿಗೆ ಅವಕಾಶ ಒದಗಿಸಬೇಕು. ಆಧ್ಯತೆಯ ಮೇರೆಗೆ ವಿಶೇಷಚೇತನರಿಗೆ ಅವಕಾಶ ನೀಡಬೇಕು. ಮಾನವ ದಿನಗಳ ಸೃಜನೆಯಲ್ಲಿ ಏರಿಕೆಯಾಗಬೇಕು.ನರೇಗಾ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ‘ಕಾಯಕಲ್ಪ ಅಭಿಯಾನ’ ಮತ್ತು ‘ಸಮಗ್ರ ಶಾಲಾ ಅಭಿವೃದ್ಧಿ ಕಾಮಗಾರಿ’ಗಳನ್ನು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳುವುದರ ಜೊತೆಗೆ ನಿರ್ವಹಣೆ ಮಾಡಿ, ಕಾಮಗಾರಿಗಳಿಗೆ ವೇಗ ನೀಡಿ, ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಪಂಚಾಯತಿಯ ಅಭಿವೃದ್ದಿ ಅಧಿಕಾರಿಗಳಿಗೆ ಸೂಚಿಸಿದರು.
ನರೇಗಾ ಯೋಜನೆಯ ಅನುಷ್ಠಾನ ಇಲಾಖೆಗಳಾದ ಕೃಷಿ ತೋಟಗಾರಿಕೆ, ರೇಷ್ಮೆ ಸಾಮಾಜಿಕ ಅರಣ್ಯ ಇಲಾಖೆಯೂ ಸೇರಿದಂತೆ ಎಲ್ಲ ಇಲಾಖೆಗಳು ನಿಗದಿತ ಮಾನವ ದಿನಗಳ ಪ್ರಗತಿಯನ್ನು ಸಕಾಲದಲ್ಲಿ ನಿರ್ವಹಿಸಬೇಕೆಂದು ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.
ಅಂಗನವಾಡಿಯಲ್ಲಿ ಮೊಟ್ಟೆ ವಿತರಣೆಯ ಟೆಂಡರ್Àನಲ್ಲಿ ಸಂಪೂರ್ಣ ಪಾರದರ್ಶಕತೆ ಕಾಪಾಡಲು ಮತ್ತು ಅಂಗನವಾಡಿಗಳಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಿ, ಮಕ್ಕಳಿಗೆ ಗುಣಮಟ್ಟದಿಂದ ಕೂಡಿದ ಆಹಾರ ನೀಡಲು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಆರ್.ಬಿರಾದಾರ, ಸಹಾಯಕ ಅಭಿಯಂತರರಾದ ವ್ಹಿ.ಬಿ.ನಾಯಕ್, ಸಹಾಯಕ ನಿರ್ದೇಶಕರಾದ ಶ್ರೀಮತಿ ಎಸ್.ಎಸ್.ಬಿರಾದಾರ,ಸಾಮಾಜಿಕ ಅರಣ್ಯ ಇಲಾಖೆಯ ಆರ್.ಎಫ್.ಓ ಎಸ್.ಜಿ.ಸಂಗಲಕ್, ಪ್ರಾದೇಶಿಕ ಅರಣ್ಯ ಇಲಾಖೆಯ ಆರ್.ಎಫ್.ಓ ಬಸನಗೌಡ ಬಿರಾದಾರ, ಆರೋಗ್ಯ ಇಲಾಖೆಯ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಸತೀಶ ತಿವಾರಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸುರೇಶ ಬಾವಿಕಟ್ಟಿ , ತೋಟಗಾರಿಕಾ ಇಲಾಖೆಯ ಪ್ರಭಾರಿ ಹಿರಿಯ ಸಹಾಯಕ ನಿರ್ದೇಶಕರಾದ ಸುಭಾಸ ಚಂದ್ರ ಟಾಕಳೆ, ತಾಂತ್ರಿಕ ಸಂಯೋಜಕ ನಾಗರಾಜ ಕಲಕೇರಿ, ಐಇಸಿ ಸಂಯೋಜಕ ಮಲಕಪ್ಪ ಮಾದರ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.