ತಾಳಿಕಟ್ಟುವ ವೇಳೆ ಮದುವೆ ತಡೆದ ವಧು

ಚಿತ್ರದುರ್ಗ.ಡಿ.೦೮: ತಾಳಿ ಕಟ್ಟಲು ರೆಡಿಯಾಗಿದ್ದ ವರನಿಗೆ ಮೂಹರ್ತ ಗಳಿಗೆಯಲ್ಲೇ ವಧು ಮಂಗಳ ಸೂತ್ರಕ್ಕೆ ಕೈ ಅಡ್ಡ ಹಿಡಿದು ಶಾಕ್ ನೀಡಿರುವ ಘಟನೆ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ನಡೆದಿದೆ.ಮದುವೆ ದಿನ ಎಲ್ಲಾ ಶಾಸ್ತ್ರಗಳನ್ನು ಮುಗಿಸಿ ತಾಳಿ ಕಟ್ಟುವ ಸಂದರ್ಭದಲ್ಲಿ ಇಷ್ಟ ಇಲ್ಲದ ಮದುವೆಯನ್ನು ಮಾಡಿಕೊಳ್ಳಲು ಆಗದೆ ಪೊಷಕರ ಎದುರು ನಿಂತು ಮಾತನಾಡಲು ಧೈರ್ಯವಿಲ್ಲದೆ ಮಧುಮಗ ಅಥವಾ ಮಧುಮಗಳು ಮದುವೆ ಮನೆಯಿಂದ ಓಡಿ ಹೋಗುವುದು ಸಹಜವಾಗಿ ನಡೆಯುತ್ತಿತ್ತು.
ಆದರೆ ಇಲ್ಲಿ ಮಾತ್ರ ಯಾರೂ ಕೂಡ ಓಡಿ ಹೋಗದೆ, ಮಧುಮಗಳು ಮೂಹರ್ತ ಗಳಿಗೆಯಲ್ಲೇ ವರ ಕಟ್ಟಲು ಮುಂದಾಗಿದ್ದ ಮಂಗಳ ಸೂತ್ರವನ್ನು ಪೊಷಕರು, ಸಂಬಂಧಿಕರ ಎದುರಿಗೆ ಧೈರ್ಯವಾಗಿ ತಡೆದ ನನಗೆ ಈ ಮಧುಮಗ ಇಷ್ಟ ಇಲ್ಲ ಎಂದು ಹೇಳುವ ಮೂಲಕ ಮದುವೆಯನ್ನು ನಿಲ್ಲಿಸಿದ್ದಾಳೆ ಇದರಿಂದ ವರ, ಪೊಷಕರು ಹಾಗೂ ನೆರೆದಿದ್ದ ಸಂಬಂಧಿಕರಿಗೆ ಶಾಕ್ ನೀಡಿದಂತಾಗಿದೆ.
ಚಳ್ಳಕೆರೆಯ ತಿಪ್ಪರೆಡ್ಡಿಹಳ್ಳಿ ಗ್ರಾಮದ ಐಶ್ವರ್ಯ ಮೂಹರ್ತ ಗಳಿಗೆಯಲ್ಲಿ ಮಂಗಳ ಸೂತ್ರ ತಡೆದು ವರ ಹಾಗೂ ಸಂಬಂಧಿಕರಿಗೆ ಶಾಕ್ ನೀಡಿರುವ ಯುವತಿ.
ಹೊಸದುರ್ಗ ತಾಲ್ಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದ ಮಂಜುನಾಥ್, ಚಳ್ಳಕೆರೆ ತಾಲ್ಲೂಕಿನ ತಿಪ್ಪರೆಡ್ಡಿಹಳ್ಳಿ ಐಶ್ವರ್ಯ ನಡವೆ ಮದುವೆ ಮಾಡಲು ಗುರು ಹಿರಿಯರು ದಿ. ೦೭-೧೨-೨೦೨೩ ರ ನಿನ್ನೆ ದಿನಾಂಕವನ್ನು ನಿಗದಿ ಮಾಡಿದ್ದರು. ಇದರಂತೆ ಬುಧವಾರ ಸಂಜೆ ತಿಪ್ಪರೆಡ್ಡಿಹಳ್ಳಿ ಗ್ರಾಮದಿಂದ ಮಧುಮಗಳು ಐಶ್ವರ್ಯ ಹಾಗೂ ಸಂಬಂಧಿಕರು ಚಿಕ್ಕಬ್ಯಾಲದ ಕೆರೆ ಮಧುಮಗನ ಗ್ರಾಮಕ್ಕೆ ಬಂದಿದ್ದಾರೆ.
ಗ್ರಾಮದ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಸಂಜೆ ಇದೇ ಮಧುಮಗನ ಜೊತೆ ಅರತಕ್ಷತೆ ಕೂಡ ಮಧುಮಗಳು ಮಾಡಿಕೊಂಡಿದ್ದು, ರಾತ್ರಿ ಈಡೀ ಮದುವೆ ಶಾಸ್ತ್ರಗಳನ್ನು ಮಧುಮಗಳು ಮಾಡಿಸಿಕೊಂಡಿದ್ದಾಳೆ.
ನಿನ್ನೆ ಬೆಳಗ್ಗೆ ೯.೩೦ ರಿಂದ ೧೦.೧೦ ರ ವರೆಗೆ ನಿಗದಿಯಾಗಿದ್ದ ಮೂಹರ್ತ ಗಳಿಗೆಯಲ್ಲೇ ತಾಳಿ ಕಟ್ಟಲು ಮುಂದಾಗಿದ್ದ ಮಂಗಳ ಸೂತ್ರಕ್ಕೆ ಕೈ ಅಡ್ಡ ಹಿಡಿದ ಮಧುಮಗಳು ಐಶ್ವರ್ಯ ನನಗೆ ಈ ಹುಡುಗ ಇಷ್ಟ ಇಲ್ಲ.
ಹಾಗಾಗಿ ನಾನು ತಾಳಿ ಕಟ್ಟಿಸಿಕೊಳ್ಳುವುದಿಲ್ಲ ಎಂದು ಅಠ ಹಿಡಿದ್ದಾಳೆ. ಈ ವೇಳೆ ಪೊಷಕರು ಹಾಗೂ ಸಂಬಂಧಿಕರು ಯುವತಿ ಐಶ್ವರ್ಯಳನ್ನು ಎಷ್ಟೇ ಮನ ಹೊಲಿಸಲು ಮುಂದಾದರೂ ಕೂಡ ಒಲ್ಲದ ಐಶ್ವರ್ಯ ಮದುವೆಯನ್ನು ನಿಲ್ಲಿಸಿದ್ದಾಳೆ. ಯುವತಿ ನಡೆಗೆ ಯುವಕನ ಸಂಬಂಧಿಕರ ಆಕ್ರೋಶ ವ್ಯಕ್ತಪಡಿಸಿದ್ದು, ಯುವತಿ ಮನೆಯವರು ಹಾಗೂ ಯುವಕನ ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿದ್ದು, ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.