ತಾಳಮದ್ದಳೆ ಅರ್ಥದಾರಿ ವಾಸುದೇವ ಸಾಮಗ ವಿಧಿವಶ

ಕುಂದಾಪುರ, ನ.೭- ತೆಂಕು ಬಡಗು ತಿಟ್ಟು ಅಪ್ರತಿಮ ಕಲಾವಿದ, ಯಕ್ಷಗಾನ ತಾಳಮದ್ದಳೆ ತಂಡ ಕಟ್ಟಿ ಮೊಟ್ಟಮೊದಲು ಸಂಚಾರ ಆರಂಭಿಸಿದ ತಾಳಮದ್ದಳೆ ಅರ್ಥದಾರಿ ವಾಸುದೇವ ಸಾಮಗ (೮೨) ಇಂದು (ಶನಿವಾರ) ವಿಧಿವಶರಾಗಿದ್ದಾರೆ.
ಹದಿನೈದು ದಿನದ ಹಿಂದೆ ಕರೊನ ಪಾಸಿಟಿವ್ ಹಿನ್ನೆಲೆಯಲ್ಲಿ ವಾಸುದೇವ ಸಾಮಗ ಅವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅನಾರೋಗ್ಯ ಬಿಗಡಾಯಿಸಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಮಣಿಪಾಲ ಆಸ್ಪತ್ರೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವಾಸುದೇವ ಸಾಮಗ ೩೦ರ ಹರೆಯದಲ್ಲೇ ಯಕ್ಷಗಾನ ರಂಗ ಪ್ರವೇಶಿಸಿದ್ದು, ಉತ್ತರನ ಪೌರುಷದ ಉತ್ತರೆ ಮೂಲಕ ಎತ್ತರಕ್ಕೆ ಏರಿದರು..ನಾಗಶ್ರೀ ಪ್ರಸಂಗದ ಪ್ರದೀಪ ಪಾತ್ರ ಸಾಮಗರನ್ನು ಎತ್ತರಕ್ಕೆ ಏರಿಸಿದ್ದು ಇದರಿಂದಲೇ ತಮ್ಮ ಮಗನಿಗೆ ಪ್ರದೀಪ ಎಂದು ನಾಮಕರಣ ಮಾಡಿದ್ದರು. ಸಾಲಿಗ್ರಾಮ, ಶಿರಸಿ, ಸುರತ್ಕಲ್ ಮೇಳದಲ್ಲಿ ತಿರುಗಾಟ ಮಾಡಿದ್ದು ಮಾತಲ್ಲೇ ಪ್ರೇಕ್ಷಕರ ಸೆರೆಹಿಡಿಯುವ ಸೂಜಿಗಲ್ಲಿನ ಸೆಳೆತ ಸಾಮಗರದಾಗಿತ್ತು. ಮೊಟ್ಟಮೊದಲು ತಾಳಮದ್ದಲೆ ತಂಡ ಕಟ್ಟಿ ಸಂಚಾರ ಮಾಡಿದ ಹಿರಿಮೆ ಸಾಮಗರದಾಗಿತ್ತು. ಮೃತರು ಪತ್ನಿ ಹಾಗೂ ಹವ್ಯಾಸಿ ಕಲಾವಿದ ಡಾ.ಪ್ರದೀಪ್ ಸಾಮಗ ಅವರನ್ನು ಅಗಲಿದ್ದಾರೆ.