ತಾಲ್ಲೂಕು ಕೇಂದ್ರಗಳಲ್ಲಿ ಆರೋಗ್ಯ ಶಿಬಿರಕ್ಕೆ ಸಚಿವರ ಸೂಚನೆ

ತುಮಕೂರು, ನ. ೧೫- ಪ್ರತಿ ತಿಂಗಳು ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಜಿಲ್ಲಾಸ್ಪತ್ರೆ ವತಿಯಿಂದ ಆಯೋಜಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ಸೂಚಿಸಿದರು.
ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾಸ್ಪತ್ರೆಯಲ್ಲಿರುವ ತಜ್ಞ ವೈದ್ಯರನ್ನು ಬಳಸಿಕೊಂಡು ತಾಲ್ಲೂಕು ಕೇಂದ್ರಗಳಲ್ಲಿ ಮಧುಮೇಹ ಸೇರಿದಂತೆ ಇನ್ನಿತರೆ ಕಾಯಿಲೆಗಳ ಬಗ್ಗೆ ತಪಾಸಣೆ ನಡೆಸಬೇಕು. ಇದನ್ನು ಗಂಭೀರವಾಗಿ ಪರಿಗಣಿಸಿ ಆರೋಗ್ಯ ಶಿಬಿರಗಳನ್ನು ಆಯೋಜಿಸಬೇಕು ಎಂದು ಡಿ.ಎಚ್.ಓ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ನಿರ್ದೇಶನ ನೀಡಿದರು.


ತಾಲ್ಲೂಕು ಆಸ್ಪತ್ರೆಗಳಲ್ಲಿ ಗರ್ಭಿಣಿಯರ ನೋಂದಣಿಯ ಪ್ರಮಾಣಕ್ಕೂ, ಹೆರಿಗೆ ಪ್ರಮಾಣಕ್ಕೂ ವ್ಯತ್ಯಾಸವಿದೆ. ಸಿರಾ, ತಿಪಟೂರು ಹಾಗೂ ತುಮಕೂರು ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆರಿಗೆ ಆಗುತ್ತಿವೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಹೆರಿಗೆ ಸೌಲಭ್ಯಗಳು ಇರುವಾಗ ಅಲ್ಲಿಯೇ ಹೆರಿಗೆ ಮಾಡಿಸಲು ಕ್ರಮ ಕೈಗೊಳ್ಳಬೇಕು. ಇದರಿಂದ ಇತರೆ ಸರ್ಕಾರಿ ಆಸ್ಪತ್ರೆಗಳ ಮೇಲೆ ಒತ್ತಡ ಕಡಿಮೆಯಾಗುತ್ತದೆ ಎಂದರು.
ಕಣ್ಣಿನ ಕ್ಯಾಟ್‌ರ್ಯಾಕ್ಟ್ ಸರ್ಜರಿಯನ್ನು ಜಿಲ್ಲಾಸ್ಪತ್ರೆಯ ಜತೆಗೆ ತಾಲ್ಲೂಕು ಆಸ್ಪತ್ರೆಗಳಲ್ಲಿ ಮಾಡಿದರೆ, ಸ್ಥಳೀಯವಾಗಿ ಕಣ್ಣಿನ ಸಮಸ್ಯೆ ಇರುವವರಿಗೆ ಅನುಕೂಲವಾಗಲಿದೆ. ತಾಲ್ಲೂಕು ಕೇಂದ್ರಗಳಿಂದ ಜಿಲ್ಲಾಸ್ಪತ್ರೆಗೆ ಬರುವ ಕಷ್ಟ ತಪ್ಪುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್‌ನಿಂದ ಗುಣಮುಖರಾದ ನಂತರ ಉಂಟಾಗುವ ಸಮಸ್ಯೆಗಳ ಕುರಿತು ಪರೀಕ್ಷೆ ನಡೆಸಿ ಚಿಕಿತ್ಸೆ ನೀಡುವ ಬಗ್ಗೆಯೂ ಗಮನಹರಿಸಬೇಕು. ಗುಣಮುಖರಾಗಿ ಮನೆಗೆ ತೆರಳಿದವರು ಆಗ್ಗಿಂದಾಗ್ಗೆ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳುವ ಬಗ್ಗೆ ಅವರಿಗೆ ತಿಳಿ ಹೇಳಿ ಎಂದು ಡಿಹೆಚ್‌ಓ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ತಿಳಿಸಿದರು.
ಸಿರಾ ತಾಲ್ಲೂಕಿನಲ್ಲಿ ಶೇ. ೫೦ ರಷ್ಟು, ಉಳಿದ ತಾಲ್ಲೂಕುಗಳಲ್ಲಿ ಶೇ. ೧೦ರಷ್ಟು ಜನರಿಗೆ ಕೊರೋನಾ ತಪಾಸಣೆ ನಡೆಸುವಂತೆ ಇದೇ ಸಂದರ್ಭದಲ್ಲಿ ಸಚಿವರು ಸೂಚಿಸಿದರು.
ಪ್ರತಿಯೊಂದು ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಿದ ಸಚಿವರು, ನವೆಂಬರ್ ೧೭ರಂದು ನಡೆಯುವ ಕೆಡಿಪಿ ಸಭೆಗೆ ಸಂಪೂರ್ಣ ಮಾಹಿತಿಯೊಂದಿಗೆ ಹಾಜರಾಗುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕೆರೆಗಳಿಗೆ ನೀರು ಹರಿಸಬೇಕು ಎಂದು ಹೇಮಾವತಿ ನಾಲಾ ಇಂಜಿನಿಯರ್‍ಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಜಿಲ್ಲಾ ಪಂಚಾಯತಿ ಸಿಇಓ ಶುಭಾ ಕಲ್ಯಾಣ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು. @೧೨bಛಿ = ಡಿಎಂಎಫ್ ಸಭೆ
೨೦೨೦-೨೧ನೇ ಸಾಲಿನ ಡಿಎಂಎಫ್ ಕ್ರಿಯಾ ಯೋಜನೆಯ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಡಿಎಂಎಫ್ ಸಭೆಯು ಇದೇ ಸಂದರ್ಭದಲ್ಲಿ ನಡೆಯಿತು.
ಜಿಲ್ಲೆಯ ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗಾಗಿ ಡಿಎಂಎಫ್ ನಿಧಿಯನ್ನು ಬಳಕೆ ಮಾಡಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸಿ. ನಾಗೇಶ್, ವೆಂಕಟರಮಣಪ್ಪ, ಡಿ.ಸಿ. ಗೌರಿಶಂಕರ್, ಡಾ. ರಂಗನಾಥ್, ಡಾ. ರಾಜೇಶ್‌ಗೌಡ, ಡಿಎಂಎಫ್ ಟ್ರಸ್ಟ್‌ನ ಸದಸ್ಯರಾದ ಆಶಾ ಪ್ರಸನ್ನಕುಮಾರ್, ನವ್ಯಬಾಬು, ಜಯ್‌ಕುಮಾರ್, ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್‌ಕುಮಾರ್, ಸಿಇಓ ಶುಭಾ ಕಲ್ಯಾಣ್ ಮತ್ತಿತರರು ಭಾಗವಹಿಸಿದ್ದರು.