ತಾಲ್ಲೂಕು ಆರೋಗ್ಯ ಅಧಿಕಾರಿ ಕಚೇರಿ ಬಳಿ ಒಳಗುತ್ತಿಗೆ ನೌಕರರ ಪ್ರತಿಭಟನೆ

ದಾವಣಗೆರೆ.ಮಾ.೧೦: ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಒಳಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವ ನೌಕರರನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಒಳಗುತ್ತಿಗೆ ನೌಕರರು ಜಿಲ್ಲಾಸ್ಪತ್ರೆ ಆವರಣದಲ್ಲಿರುವ ತಾಲ್ಲೂಕು ಆರೋಗ್ಯ ಅಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಸುಮಾರು 30,000ಕ್ಕೂ ಹೆಚ್ಚು ಒಳಗುತ್ತಿಗೆ ನೌಕರರು ಕಳೆದ 20- 25 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಣಿಪುರ, ಒಡಿಸ್ಸಾ, ಪಂಜಾಬ್, ರಾಜಸ್ಥಾನ್, ಹಿಮಾಚಲ ಪ್ರದೇಶಗಳ ಸರ್ಕಾರಗಳು  ಈಗಾಗಲೇ ಒಳಗುತ್ತಿಗೆ ನೌಕರರನ್ನು ಕಾಯಂಗೊಳಿಸಿವೆ. ಅದೇ ರೀತಿ ರಾಜ್ಯದಲ್ಲೂ ಸಹ ಒಳಗುತ್ತಿಗೆ ನೌಕರರನ್ನು ಕಾಯಂ ಮಾಡಬೇಕೆಂದು ಆಗ್ರಹಿಸಿದರು.ರಾಷ್ಟ್ರೀಯ ಆರೋಗ್ಯ ಅಭಿಯಾನದ ಒಳಗುತ್ತಿಗೆ ನೌಕರರು ಕೋವಿಡ್ ನಂತಹ ಮಾರಕ ಕಾಯಿಲೆ ಬಂದಾಗಲೂ ತಮ್ಮ ಕರ್ತವ್ಯದ ಜೊತೆ ಸೋಂಕಿತರ ಹಾರೈಕೆ, ವ್ಯಾಕ್ಸಿನ್ ಕೊಡುವ ಜೊತೆಯಲ್ಲೂ ಅವರ ಎಲ್ಲಾ ಸೇವೆಗಳನ್ನು ಮಾಡಿದ್ದೇವೆ. ಆದರೂ ಸರ್ಕಾರ ನಮ್ಮ ಸೇವೆಯನ್ನು ಪರಿಗಣಿಸಿಲ್ಲ. ಸಾರ್ವಜನಿಕರ ಆರೋಗ್ಯ ಕಾಪಾಡುವ ನಮ್ಮ ಬಗ್ಗೆ ಸರ್ಕಾರ ನಿರ್ಲಕ್ಷ ವಹಿಸಿದ್ದು ಈ ಕೂಡಲೇ ನಮ್ಮನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.ಅಲ್ಪ ಮೊತ್ತದ ವೇತನದಲ್ಲಿ ಒಳಗುತ್ತಿಗೆ ನೌಕರರು ಕೌಟುಂಬಿಕ ಜೀವನ ನಡೆಸಲು ಕಷ್ಟಕರವಾಗಿದೆ. ಆದರೂ ಈವರೆಗೂ ನಮ್ಮಗಳ ಸೇವೆಯಲ್ಲಿ ವ್ಯತ್ಯಯ ಆಗದಂತೆ ಸೇವೆ ಸಲ್ಲಿಸುತ್ತಿದ್ದೇವೆ. ನಮ್ಮಗಳ ಸಮಸ್ಯೆ ಕುರಿತಂತೆ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ನಮ್ಮ ರಾಜ್ಯ ಸಂಘವು ಫೆಬ್ರವರಿ 13 ರಿಂದ ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಅನಿರ್ದಿಷ್ಟ ಮುಷ್ಕರ ನಡೆಸುತ್ತಿದೆ. ಆದರೂ ಸಹ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಕಾರಣ ರಾಜ್ಯ ಸರ್ಕಾರ ಈ ಕೂಡಲೇ ಮುಂದಾಗಿ ನಮ್ಮಗಳ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಎ.ಎಲ್. ಮಂಜುನಾಥ್,  ಸುರೇಶ್ ಕುಮಾರ್, ಉಮಾ ಬಾಯಿ, ಮಹಾಲಿಂಗಪ್ಪ, ಶಿವರಾಯಪ್ಪ ದೊಡ್ಡಮನೆ, ಸುರೇಖಾ, ಅಂಬರೀಶ್, ವೆಂಕಟೇಶ್, ಶ್ರೀನಿವಾಸ್, ಬಸವರಾಜ್, ಮಲ್ಲಿಕಾರ್ಜುನ್, ಮಾಲತೇಶ್, ಜಗದೀಶ್, ಅಬ್ದುಲ್ ಶರೀಫ್, ರಮೇಶ್ ಇತರರು ಇದ್ದರು.