ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ ನಡಿಗೆ ಹಳ್ಳಿಗಳ ಕಡೆಗೆ

ಕೆ.ಆರ್.ಪೇಟೆ. ಮೇ.27: ತಾಲ್ಲೂಕಿನಲ್ಲಿ ಮಹಾಮಾರಿಯ ನಿಯಂತ್ರಣಕ್ಕೆ ಪಣತೊಟ್ಟಿರುವ ತಾಲ್ಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ವೈದ್ಯರುಗಳ ನಡಿಗೆ ಹಳ್ಳಿಗಳ ಕಡೆಗೆ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ವೈದ್ಯರುಗಳೇ ಗ್ರಾಮಗಳಿಗೆ ತೆರಳಿ ಜನರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ
ಈ ಕುರಿತು ಮಾತನಾಡಿದ ತಾಲ್ಲೂಕಿನ ಸಿಂಧಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ,ಹರ್ಷ ತಾಲ್ಲೂಕಿನ ಶೀಳನೆರೆ ಹೋಬಳಿಯ ಕ್ಯಾತನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೊರೋನಾ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕೆಲಸ ನಿರ್ವಹಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ಸಾರ್ವಜನಿಕರು ಅನಾರೋಗ್ಯಕ್ಕೆ ಒಳಗಾದರೂ ಕೋವಿಡ್ ಪರೀಕ್ಷೆಗೆ ಬಾರದೇ, ವೈದ್ಯರುಗಳನ್ನು ಸಂಪರ್ಕಿಸದೇ ಕೆಲವು ಮಾತ್ರೆಗಳನ್ನು ತೆಗೆದುಕೊಳ್ಳುವ ಮೂಲಕ ತಮ್ಮ ಆರೋಗ್ಯವನ್ನು ವಿಷಮಸ್ಥಿತಿಗೆ ಕೊಂಡೋಯ್ಯುತ್ತಿದ್ದಾರೆ. ಇದನ್ನು ಅರಿತು ಸರ್ಕಾರವೇ ವೈದ್ಯರುಗಳ ನಡಿಗೆ ಹಳ್ಳಿಗಳ ಕಡೆಗೆ ಎಂಬ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು ವೈದ್ಯರುಗಳೇ ನಿಮ್ಮ ಗ್ರಾಮಕ್ಕೆ ಬಂದು ಗ್ರಾಮದಲ್ಲಿ ಯಾರಿಗೆ ಜ್ವರ, ಶೀತ, ನೆಗಡಿ, ಕೆಮ್ಮು, ಮೈಕೈನೋವು, ತಲೆನೋವು ಇತ್ಯಾದಿಗಳು ಇದ್ದವರಿಗೆ ಉಚಿತವಾಗಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ತಮ್ಮ ಆರೋಗ್ಯದ ಕಡೆಗೆ ಗಮನ ನೀಡಬೇಕು ಎಂದು ತಿಳಿಸಿದರು.
ತಹಶೀಲ್ದಾರ್ ಎಂ.ಶಿವಮೂರ್ತಿ ಈ ಬಗ್ಗೆ ಪ್ರತಿಕ್ರಿಯಿಸಿ ತಾಲ್ಲೂಕಿನಾದ್ಯಂತ ಇರುವ 20 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯರುಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ತೆರಳಿ ಪ್ರತೀದಿನ 1-2 ಗ್ರಾಮಗಳ ಜನರ ಆರೋಗ್ಯ ತಪಾಸಣೆ ನಡೆಸಲಾಗುವ ಈ ಕಾರ್ಯಕ್ರಮಕ್ಕೆ ಐದು ವಾಹನಗಳನ್ನು ಒದಗಿಸಿಕೊಡಲಾಗಿದೆ. ಅಲ್ಲದೇ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬರುವವರನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ಕರೆದೊಯ್ಯಲು ಆರು ಆಂಬುಲೆನ್ಸ್‍ಗಳನ್ನು ನೀಡಲಾಗಿದೆ. ಅಲ್ಲದೇ ಸಾರಂಗಿಯಲ್ಲಿ ಸ್ಥಾಪನೆಯಾಗಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸೋಂಕಿತರಿಗೆ ಆರೈಕೆ ಮಾಡಲು 500-1000 ಬೆಡ್‍ಗಳ ಸೌಲಭ್ಯವನ್ನು ಮಾಡಿಕೊಳ್ಳಲಾಗಿದೆ. ತಾಲ್ಲೂಕಿನಲ್ಲಿ ಮಹಾಮಾರಿಯ ನಿಯಂತ್ರಣಕ್ಕೆ ಸಚಿವ ಕೆ.ಸಿ.ನಾರಾಯಣಗೌಡರ ನಿರ್ದೇಶನದಂತೆ ಕೆಲಸ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.