ತಾಲ್ಲೂಕು ಅಭಿವೃದ್ಧಿಗೆ ಪ್ರತ್ಯೇಕ ಪ್ರಣಾಳಿಕೆ ರಚಿಸಿದೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.23: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದ್ದು ಈಗ ಮಂಡ್ಯ ಲೋಕಸಭಾ ಕ್ಷೇತ್ರದ ಎಲ್ಲಾ ತಾಲ್ಲೂಕುಗಳನ್ನು ಹಂತಹಂತವಾಗಿ ಅಭಿವೃದ್ದಿಗೊಳಿಸಲು ಪ್ರತ್ಯೇಕ ಪ್ರಣಾಳಿಕೆಯನ್ನು ರಚಿಸಲಾಗಿದೆ ಚುನಾವಣೆ ಮುಗಿದ ನಂತರ ಅವುಗಳನ್ನು ಅನುಷ್ಟಾನಕ್ಕೆ ತರಲು ರಾಜ್ಯ ಸರ್ಕಾರ ಶ್ರಮಿಸಲಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಿತ್ರ ಫೌಂಡೇಷನ್ ಅಧ್ಯಕ್ಷ ವಿಜಯ್ ರಾಮೇಗೌಡ ತಿಳಿಸಿದರು.
ಅವರು ಪಟ್ಟಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಮಂಡ್ಯ ಜಿಲ್ಲೆ ಈ ಹಿಂದಿನಿಂದಲೂ ಬುದ್ದಿವಂತರನ್ನು ಆರಿಸಿ ಕಳುಹಿಸಿರುವ ಜಿಲ್ಲೆಯಾಗಿದ್ದು ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಟಾರ್ ಚಂದ್ರು(ವೆಂಕಟರಮಣೇಗೌಡ)ರವರು ಅಭ್ಯರ್ಥಿಯಾಗಿದ್ದು ಅವರಿಗೆ ಹೆಚ್ಚಿನ ಬಹುಮತ ನೀಡಿ ಗೆಲುವು ತಂದುಕೊಡಬೇಕು. ರಾಜ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ನೀಡುವ ಮೂಲಕ ಜಿಲ್ಲೆಯ ಜನರ ಕುಟುಂಬಗಳಿಗೆ ನೆರವು ನೀಡಿದೆ. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತಿ ಡಿ.ಕೆ.ಶಿವಕುಮಾರ್ ರವರೊಂದಿಗೆ ಚರ್ಚಿಸಿ ಜಿಲ್ಲೆಗೆ ಪ್ರತ್ಯೇಕ ಪ್ಯಾಕೇಜ್ ನೀಡಲು ಮುಂದಾಗಿದೆ. ಜಿಲ್ಲೆಯ ಅಭಿವೃದ್ದಿಗಾಗಿ ಸಾಫ್ಟ್ವೇರ್ ಪಾರ್ಕ್ ನಿರ್ಮಾಣ, ಕೃಷಿ ವಿವಿಯ ಸ್ಥಾಪನೆ. ಮೆಡಿಕಲ್ ಕಾಲೇಜು ಉನ್ನತೀಕರಣ, ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣ, ವಸತಿ ಹೀನರಿಗೆ 10 ಸಾವಿರ ಮನೆ ನಿರ್ಮಾಣ, ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ, 20 ಸಾವಿರ ಉದ್ಯೋಗ ಸೃಷ್ಟಿಗೆ ಜವಳಿ ಪಾರ್ಕ್ ಸ್ಥಾಪನೆ ಮಾಡಲಾಗುತ್ತಿದೆ.
ಕೆ.ಆರ್.ಪೇಟೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗೂಡೆಹೊಸಹಳ್ಳಿ ಮತ್ತು ಕಟ್ಟಹಳ್ಳಿ ಏತನೀರಾವರಿ ಯೋಜನೆಯನ್ನು ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸುವುದು. ಶ್ರೀರಂಗಪಟ್ಟಣ- ಚನ್ನರಾಯಪಟ್ಟಣ ರಸ್ತೆ ಅಭಿವೃದ್ಧಿ, ಗ್ರಾಮೀಣ ಪ್ರದೇಶದ ರಸ್ತೆಗಳ ನಿರ್ಮಾಣ, ಹೇಮಾವತಿ, ಮಾದಾಪುರ, ಅಕ್ಕಿಹೆಬ್ಬಾಳು ನಾಲೆ ಆಧುನೀಕರಣ, ಕೆ.ಆರ್.ಪೇಟೆಯಿಂದ ಬೆಂಗಳೂರು, ಮಂಗಳೂರಿಗೆ ರೈಲ್ವೆ ಸಂಪರ್ಕ ಒದಗಿಸುವುದು. ಚೆಕ್ ಡ್ಯಾಂಗಳ ನಿರ್ಮಾಣ, ನೀರು ಸಂಗ್ರಹಣೆ, ಹವಾಮಾನ ವೈಪರೀತ್ಯ ಎದುರಿಸಲು ಅರಣ್ಯೀಕರಣ, ಪರಿಸರ ಸಂರಕ್ಷಣೆ, ಬಹುಬೆಳೆ, ವೈಜ್ಞಾನಿಕ ಪದ್ಧತಿ ಅಳವಡಿಕೆ ಮಾಡಿಕೊಳ್ಳಲು ರೈತರಿಗೆ ಉತ್ತೇಜನ, ರೈತರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲು ಅರಿವು ಕಾರ್ಯಕ್ರಮ. ಸೇರಿದಂತೆ ಜಿಲ್ಲೆಯ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಜಿಲ್ಲೆಯನ್ನು ಅಭಿವೃದ್ದಿಗೊಳಿಸಲು ಪಣ ತೊಡಲಾಗಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸ್ಟಾರ್ ಚಂದ್ರುರವರಿಗೆ ನಿಮ್ಮ ಅಮೂಲ್ಯವಾದ ಮತ ನೀಡಿ ಜಯಶೀಲರನ್ನಾಗಿ ಮಾಡಬೇಕೆಂದು ಮನವಿ ಮಾಡಿದ ವಿಜಯ್ ರಾಮೇಗೌಡ
ಮಂಡ್ಯ ಜಿಲ್ಲೆಯ ಜನತೆ ಸ್ವಾಭಿಮಾನಿಗಳಾಗಿದ್ದು ಬೇರೆಯವರನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳದ ಜಿಲ್ಲೆಯಾಗಿದೆ. ಜನಪರ ಕಾಳಜಿಯನ್ನು ಇಟ್ಟುಕೊಂಡು ಜನರ ಸೇವೆ ಮಾಡಲು ರಾಜಕೀಯ ಕ್ಷೇತ್ರಕ್ಕೆ ಆಗಮಿಸಿರುವ ನಮ್ಮ ಅಭ್ಯರ್ಥಿಯನ್ನು ಬೆಂಬಲಿಸಿ. ಕಾಂಗ್ರೆಸ್ ಪಕ್ಷ ಕಳೆದ ವಿಧಾನಸಭಾ ಚುನಾವಣೆಗೆ ಮೊದಲೇ ಹೇಳಿದಂತೆ ನುಡಿದಂತೆ ನಡೆದಿರುವ ಸರ್ಕಾರವಾಗಿದ್ದು. ನಾವು ನೀಡಿದ್ದ ಭರವಸೆಗಳೆಲ್ಲವನ್ನೂ ಈಡೇರಿಸಿದ್ದೇವೆ. ಚಲುವರಾಯಸ್ವಾಮಿಯವರು ಜಿಲ್ಲೆಯ ಅಭಿವೃದ್ದಿಗೆ ವಿಶೇಷ ಆಸಕ್ತಿ ವಹಿಸಿದ್ದು ಅವರಿಗೆ ಶಕ್ತಿ ತುಂಬಬೇಕಿದೆ. ಕಾಂಗ್ರೆಸ್ ಪಕ್ಷದಿಂದ ಮಾತ್ರ ಮಂಡ್ಯ ಜಿಲ್ಲೆಯ ಅಭಿವೃದ್ದಿ ಸಾಧ್ಯ. ಅದಕ್ಕಾಗಿ ನೀವೆಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸ್ಟಾರ್ ಚಂದ್ರುರವರಿಗೆ ಮತನೀಡಿ ಗೆಲುವು ತಂದುಕೊಡಲು ಶ್ರಮಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಪುರಸಭಾ ಸದಸ್ಯ ಡಿ.ಪ್ರೇಮ್‍ಕುಮಾರ್, ಕೆ.ಸಿ.ಮಂಜುನಾಥ್, ತಾಪಂ ಮಾಜಿ ಸದಸ್ಯ ಮಾಧವಪ್ರಸಾದ್, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಗೋವಿಂದರಾಜು, ಸಾಸಲು ಈರಪ್ಪ, ವಿಜಯ್, ನಾಟನಹಳ್ಳಿಅನಿಲ್, ಚೌಡೇನಹಳ್ಳಿರಘು, ವಿಜಯ್ ರಾಮೇಗೌಡರ ಆಪ್ತಸಹಾಯಕ ಬಸವರಾಜು ಸೇರಿದಂತೆ ಹಲವರಿದ್ದರು.