ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ದಿಗೆ ಕೈಮೀರಿ ಶ್ರಮಿಸುವೆ

ಪಿರಿಯಪಟ್ಟಣ: ಜು.19:- ಸರ್ಕಾರ ಇಲ್ಲದಿದ್ದರೂ ಅಧಿಕಾರದಲ್ಲಿರುವವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ದಿಗೆ ಕೈಮೀರಿ ಶ್ರಮಿಸುತ್ತಿರುವುದಾಗಿ ಶಾಸಕ ಕೆ. ಮಹದೇವ್ ತಿಳಿಸಿದರು.
ಸಮೀಪದ ಮಹದೇಶ್ವರ ಮಠದ ಗ್ರಾಮದಲ್ಲಿ ಸುಮಾರು 84 ಲಕ್ಷ ರೂಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು ನಾನು ಶಾಸಕನಾದ ಮೊದಲ ವರ್ಷದಲ್ಲಿ ಅತಿವೃಷ್ಟಿಯಿಂದ ಸರ್ಕಾರದ ಬೊಕ್ಕಸದಿಂದ ಯಾವುದೇ ಅನುದಾನವನ್ನು ಪಡೆಯಲಾಗಲಿಲ್ಲ, ನಂತರ ಎರಡನೇ ವರ್ಷದಲ್ಲಿ ಕೋವಿಡ್ ಪರಿಸ್ಥಿತಿ ಎಲ್ಲರನ್ನು ಕೈಕಟ್ಟಿ ಮನೆಯಲ್ಲಿ ಕೂರಿಸಿದಂತಾಗಿತ್ತು, ಇನ್ನು ಉಳಿದ 2 ವರ್ಷಗಳ ಅವಧಿಯಲ್ಲಿ ಸಂಬಂಧಪಟ್ಟ ಮಂತ್ರಿಗಳು, ಸಂಸದರನ್ನು ಭೇಟಿ ಮಾಡಿ ಪಿರಿಯಾಪಟ್ಟಣ ಕ್ಷೇತ್ರಕ್ಕೆ ಬೇಕಾಗುವ ಮೂಲಭೂತ ಸೌಕರ್ಯಗಳ ಒದಗಿಸಲು ಅವರ ಬಳಿ ಅಂಗಲಾಚಿ ಬೇಡಿ ಅನುದಾನ ಬಿಡುಗಡೆ ಮಾಡಿಸಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲುತ್ತಿದ್ದೇನೆ.
ನಾನು ಶಾಸಕನಾದಾಗಿನಿಂದ ಕೈಗೊಂಡಿರುವ ಕಾಮಗಾರಿಗಳನ್ನು ಸಂಪೂರ್ಣವಾಗಿ ಮುಗಿಸಿದ್ದೇನೆ, ಅಲ್ಲದೆ ಗ್ರಾಮೀಣ ಭಾಗದಲ್ಲಿ ಹತ್ತಾರು ವರ್ಷಗಳ ಕಾಲ ಬಾಳಿಕೆ ಬರಬೇಕೆಂದು ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ಮಾಡಿಸಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಆದ್ಯತೆ ನೀಡಿದ್ದೇನೆ. ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಆಶೀರ್ವಾದ ಮಾಡಿದರೆ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ನಾನು ಶ್ರಮಿಸುವುದಾಗಿ ಹೇಳಿದರು.
ಇದೇ ವೇಳೆ ಗ್ರಾಮಸ್ಥರಿಂದ ಮಾದೇಶ್ವರ ಮಠದ ದೇವಸ್ಥಾನದ ಸುತ್ತ ಅನ್ನದಾಸೋಹ ಭವನವನ್ನು ನಿರ್ಮಿಸಿಕೊಡುವಂತೆ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೆ ಮಹದೇವ್ ಮುಂದಿನ ದಿನಗಳಲ್ಲಿ ಉತ್ತಮ ಭವನ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.
ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಮುಖಂಡರಾದ ಮಲ್ಲಿಕಾರ್ಜುನ, ಪುಟ್ಟರಾಜೇಗೌಡ, ಸುಂದರ್, ಸ್ವಾಮಿಗೌಡ, ರುದ್ರೇಶ್, ಮಹದೇವಪ್ಪ, ಪ್ರಸನ್ನ, ಮಹಾಲಿಂಗಪ್ಪ, ಬೋರೇಗೌಡ, ಜಗದೀಶ್, ವಿದ್ಯಾಶಂಕರ್, ಪಟೇಲ್ ನಟೇಶ್, ಹರೀಶ್, ಕಿತ್ತೂರು ದಿನೇಶ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.