ತಾಲ್ಲೂಕಿನ ವಿವಿಧ ಗ್ರಾ.ಪಂಗಳಿಗೆ ಸಿಇಒ ಯೋಗೀಶ್ ಭೇಟಿ

ಪಿರಿಯಾಪಟ್ಟಣ: ಜೂ.03: ತಾಲ್ಲೂಕಿನ ವಿವಿಧ ಗ್ರಾ.ಪಂಗಳಿಗೆ ಜಿ.ಪಂ ಸಿಇಒ ಯೋಗೀಶ್ ಭೇಟಿ ಕೊರೊನಾ ನಿರ್ವಹಣೆ ಸಂಬಂಧ ಕೈಗೊಂಡಿರುವ ಕ್ರಮಗಳು ಹಾಗೂ ಗ್ರಾ.ಪಂ ವತಿಯಿಂದ ಪ್ರಗತಿಯಲ್ಲಿರುವ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಜಿ.ಪಂ ಸಿಇಒ ಯೋಗೀಶ್ ಅವರು ಕೆರೆ ಅಭಿವದ್ಧಿ ಸಂದರ್ಭ ಒತ್ತುವರಿಯಾಗಿದ್ದರೆ ಮೊದಲು ತೆರವುಗೊಳಿಸಿ ನಂತರ ಕಾಮಗಾರಿ ಪ್ರಾರಂಭಿಸಬೇಕು, ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚು ಆದ್ಯತೆ ನೀಡಬೇಕು, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಎದುರಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು, ಗ್ರಾ.ಪಂ ಸದಸ್ಯರಿಗೂ ಸಹ ಲಸಿಕೆ ವಿತರಿಸಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರುವುದಾಗಿ ತಿಳಿಸಿದರು, ಕೊರೊನಾ ಸೋಂಕು ತಡೆಗಟ್ಟಲು ಶ್ರಮಿಸುತ್ತಿರುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಅಗತ್ಯ ಸುರಕ್ಷಾ ಪರಿಕರಗಳನ್ನು ವಿತರಿಸುವಂತೆ ತಿಳಿಸಿ ಹೋಮ್ ಐಸೋಲೇಷನ್ ನಲ್ಲಿರುವ ಸೋಂಕಿತರ ಮನೆಗಳಿಗೆ ಪ್ರತಿನಿತ್ಯ ಭೇಟಿ ನೀಡಿ ಆರೋಗ್ಯ ವಿಚಾರಿಸುವಂತೆ ಸೂಚಿಸಿದರು, ಗ್ರಾ.ಪಂ ಗಳಲ್ಲಿ ಟಾಸ್ಕ್ ಫೆÇೀರ್ಸ್ ಸಭೆ ನಡೆಸಿ ಸೋಂಕು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು, ಘನತ್ಯಾಜ್ಯ ವಿಲೇವಾರಿ ಉತ್ತಮ ನಿರ್ವಹಣೆ, ಗ್ರಾ.ಪಂ ವಾರು ಡಿಜಿಟಲ್ ಲೈಬ್ರರಿ ನಿರ್ಮಾಣಕ್ಕೆ ಮುಂದಾಗುವಂತೆ ತಿಳಿಸಿದರು.
ಹಿಟ್ನೆಹೆಬ್ಬಾಗಿಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯರಾದ ಡಾ.ಬಸವರಾಜು ಅವರಿಂದ ಕೊರೊನಾ ಲಸಿಕೆ ವಿತರಣೆ, ಸೋಂಕು ತಪಾಸಣೆ ಹಾಗೂ ಔಷಧಿ ಮಾತ್ರೆಗಳ ಸಂಗ್ರಹದ ಬಗ್ಗೆ ಮಾಹಿತಿ ಪಡೆದರು, ಹಿಟ್ನೆಹೆಬ್ಬಾಗಿಲು ಗ್ರಾ.ಪಂ ಪಿಡಿಒ ಎಂ.ಎನ್ ಪ್ರಶಾಂತ್ ಅವರು ಅಂಗವಿಕಲರಾಗಿದ್ದರು ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು, ಭುವನಹಳ್ಳಿ ಗ್ರಾಮದಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಶೀಘ್ರ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿ ಗ್ರಾಮದ ಮನೆಯೊಂದಕ್ಕೆ ಭೇಟಿ ನೀಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ವಿತರಿಸಿರುವ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲಿಸಿದರು.
ಈ ವೇಳೆ ಕಿರನಲ್ಲಿ, ರಾಮನಾಥತುಂಗ, ಹಿಟ್ನೆಹೆಬ್ಬಾಗಿಲು, ಭುವನಹಳ್ಳಿ, ಕೋಮಲಾಪುರ ಗ್ರಾಪಂಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಿಇಒ ಅವರು ಪಿಡಿಒ ಹಾಗೂ ಸಿಬ್ಬಂದಿಯಿಂದ ಮಾಹಿತಿ ಪಡೆದರು.
ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಅವರು ಗ್ರಾ.ಪಂ ವತಿಯಿಂದ ಕೊರೊನಾ ನಿರ್ವಹಣೆ ಸಂಬಂಧ ಕೈಗೊಂಡಿರುವ ಕ್ರಮ ಹಾಗೂ ನರೇಗಾ ಕಾಮಗಾರಿಗಳ ಮಾಹಿತಿ ನೀಡಿದರು.
ಸಿಡಿಪಿಒ ಕುಮಾರ್ ಅವರು ಅಂಗವಿಕಲರಿಗೆ ಲಸಿಕೆ ವಿತರಿಸಲು ಕೈಗೊಂಡಿರುವ ಕ್ರಮ ಹಾಗೂ ಇಲಾಖೆ ವತಿಯಿಂದ ಗರ್ಭಿಣಿ ಬಾಣಂತಿಯರು ಹಾಗೂ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳ ಮೂಲಕ ಪೂರೈಕೆಯಾಗಿರುವ ಆಹಾರ ಪದಾರ್ಥಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಹಿಟ್ನೆಹೆಬ್ಬಾಗಿಲು ಗ್ರಾ.ಪಂ ಅಧ್ಯಕ್ಷೆ ಮೀನಾಕ್ಷಿ, ಪಿಡಿಒ ಪ್ರಶಾಂತ್, ಕಾರ್ಯದರ್ಶಿ ಎನ್.ಎ ದಮಯಂತಿ, ಎಂಆರ್ ಡಬ್ಲ್ಯೂ ಕಾರ್ಯಕರ್ತೆ ಲಕ್ಷ್ಮಿ, ಭುವನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಸರಿತಾ ಶಂಕರ್, ಉಪಾಧ್ಯಕ್ಷ ಶಿವಕುಮಾರ್, ಪಿಡಿಒ ಬಸವರಾಜ್, ಕಾರ್ಯದರ್ಶಿ ಶ್ರೀನಿವಾಸ್, ಕೋಮಲಾಪುರ ಗ್ರಾ.ಪಂ ಅಧ್ಯಕ್ಷೆ ಸುಗುಣಾ, ಉಪಾಧ್ಯಕ್ಷ ಗಣೇಶ್, ಪಿಡಿಒ ಶಿವನಗೌಡ ಕೋರಿಗೌಡ್ರು ಹಾಗೂ ಎಲ್ಲಾ ಗ್ರಾ.ಪಂ ಗಳ ಸದಸ್ಯರು, ಸಿಬ್ಬಂದಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಜರಿದ್ದರು.