ತಾಲ್ಲೂಕಿನಾದ್ಯಂತ ಸಂಭ್ರಮದ ಹೋಳಿ ಹಬ್ಬ ಆಚರಣೆ

ಔರಾದ : ಮಾ.27:ರಂಗು ರಂಗಿನ ಹೋಳಿ ಹಬ್ಬವನ್ನು ತಾಲೂಕಿನಾದ್ಯಂತ ಸೋಮವಾರ ಸಂಭ್ರಮ- ಸಡಗರದಿಂದ ಆಚರಿಸಿದರು. ಪಟ್ಟಣದಲ್ಲಿ ಮುಂಜಾನೆಯಿಂದಲೇ ಯುವಕರ ಗುಂಪುಗಳು ವಿವಿಧೆಡೆಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತಾ ಓಕುಳಿಯಾಟದಲ್ಲಿ ತೊಡಗಿತ್ತು. ದಾರಿ ಹೋಕರು ಹಾಗೂ ಬೈಕ್‍ನಲ್ಲಿ ಸಾಗುತ್ತಿದ್ದವರಿಗೆ ಹುಡುಗರು ಬಣ್ಣ ಹಚ್ಚಿ ‘ಹ್ಯಾಪಿ ಹೋಳಿ’ ಎನ್ನುತ್ತಾ ಸಂಭ್ರಮಿಸಿದರು.

ಪಟ್ಟಣದ ಶಿಕ್ಷಕರ ಕಾಲೋನಿಯ ಮಹಿಳೆಯರು ಸೇರಿ ಒಬ್ಬರ ಮನೆಗೆ ಒಬ್ಬರು ಹೋಗಿ ಬಣ್ಣವನ್ನು ಎರಚಿ ಕೊಂಡು ಕುಣಿದು ಕುಪ್ಪಳಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಸಂಬಂಧಗಳನ್ನು ಬೆಸೆಯುವ ಹಬ್ಬ ಇದಾಗಿದೆ. ಹೋಳಿ ಹಬ್ಬ ವನ್ನು ಹಿಂದೂ ತಿಂಗಳ ಫಾಲ್ಗುಣದ ಹುಣ್ಣಿಮೆಯೆಂದು ಆಚರಿಸಲಾಗುತ್ತದೆ . ಹೋಳಿ ಹಬ್ಬವನ್ನು ದೇಶ ಅಲ್ಲದೆ ಅಂತರರಾಷ್ಟ್ರಗಳಲ್ಲಿ ಆಚರಿಸುತ್ತಿದ್ದಾರೆ ಇದು ಕೇವಲ ಹಬ್ಬ ಮಾತ್ರವಲ್ಲ ವಸಂತ ಮಾಸದ ಆಗಮನವನ್ನು ಸೂಚಿಸುತ್ತದೆ ಎಂದು ಬಡಾವಣೆಯ ಹಿರಿಯ ಜೀವಿ ಗೌರಮ್ಮಾ ಹಿರೇಮಠ ಹೇಳಿದರು.

ದುರ್ಗುಣಗಳನ್ನು ತೊಲಗಿಸಿ, ಒಳ್ಳೆಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರತಿಬಿಂಬಿಸುವ ಹಬ್ಬ ಹೋಳಿ ಹಬ್ಬ, ಯಾವುದೇ ಜಾತಿ, ಮತ, ಧರ್ಮ ಪರಿಗಣಿಸದೆ ಎಲ್ಲರೂ ಒಂದಾಗಿ ಜೀವನದಲ್ಲೂ ಕೂಡ ಬಣ್ಣ ಬಣ್ಣಗಳಿಂದ ಕೂಡಿದ ಬದುಕು ಇರಬೇಕೆಂದು ಹೇಳಿದರು.