ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕನ್ನಡ ರಾಜ್ಯೋತ್ಸವ

ಪುತ್ತೂರು, ನ.೨- ಸುಂದರ, ಸುಲಲಿತ ಭಾಷೆ, ವಿವಿಧ ಪ್ರಾಂತ್ಯಗಳಲ್ಲಿ ತನ್ನದೇ ಆದ ವೈಶಿಷ್ಟ್ಯತೆ ಹೊಂದಿ ಬೆಳೆದು ಬಂದಿರುವ ಕನ್ನಡ ಭಾಷೆ ಒಗ್ಗಟ್ಟು ಮೂಡಿಸುವ ಶಕ್ತಿಯಾಗಿ ಬೆಳೆದು ಬಂದಿದೆ. ಈ ನಿಟ್ಟಿನಲ್ಲಿ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಪುತ್ತೂರು ಉಪವಿಭಾಗಾಧಿಕಾರಿ  ಡಾ.ಯತೀಶ್ ಉಳ್ಳಾಲ್ ಅಭಿಪ್ರಾಯಪಟ್ಟರು.

ಅವರು ಭಾನುವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕಿಲ್ಲೇ ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ರಾಷ್ಟ್ರಧ್ಚಜಾರೋಹಣ ಮಾಡಿ ಸಂದೇಶ ನೀಡಿದರು.

ಪ್ರಸ್ತುತ ಕನ್ನಡ ಭಾಷೆಯ ಕೀ ಪ್ಯಾಡ್‌ಗಳು ಆಧುನೀಕ ತಂತ್ರಜ್ಞಾನವಾದ ಕಂಪ್ಯೂಟರ್, ಮೊಬೈಲ್‌ನಲ್ಲಿ ಸುಲಲಿತವಾಗಿ ಸಿಗುತ್ತಿದ್ದು, ಕನ್ನಡ ನಾಡು, ನುಡಿಯ ಅಚ್ಚಳಿಯದ ಭಾಷೆ ಕನ್ನಡದ ಉಳಿವು, ಬೆಳವಣಿಗೆಗಾಗಿ ಇನ್ನಷ್ಟು ಚಿಂತನೆಗಳು ನಡೆಯಬೇಕಿದೆ ಎಂದ ಅವರು, ಬೇರೆ ಬೇರೆ ಶಾಸನಗಳು, ಗ್ರಂಥಗಳಲ್ಲಿ ಉಲ್ಲೇಖಿಸಿದಂತೆ ಭೌಗೋಳಿಕ ಪ್ರದೇಶ ಕರ್ನಾಟಕ ರಾಜ್ಯ ಆಗಬೇಕು ಎಂಬ ನಿಟ್ಟಿನಲ್ಲಿ ನ.೧ ರಂದು ಘೋಷಣೆಯಾಗಿದೆ. ಅದರಂತೆ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಸಂಭ್ರಮದಿಂದ ಮಾಡಲಾಗುತ್ತಿದೆ ಎಂದರು.

ಶಾಸಕ ಸಂಜೀವ ಮಠಂದೂರು ಕನ್ನಡ ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ರಮೇಶ್ ಬಾಬು ಟಿ., ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ., ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಗರ ಠಾಣಾ ಎಸ್‌ಐ ಗೋಪಾಲ ನಾಯ್ಕ್ ಉಪಸ್ಥಿತರಿದ್ದರು. ಗಾಯಕಿ ಪವಿತ್ರಾ ರೂಪೇಶ್ ತಂಡದವರು ರಾಷ್ಟ್ರಗೀತೆ ಹಾಗೂ ನಾಡಗೀತೆ ಹಾಡಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೋವಿಡ್-೧೯ ಸರಕಾದ ನಿಯಮಾವಳಿಯಂತೆ ಸೀಮಿತ ಜನರ ಉಪಸ್ಥಿತಿಯಲ್ಲಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಜಂಬುರಾಜ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಿಂದ ಗೌರವ ವಂದನೆ ನಡೆಯಿತು. ಗೃಹರಕ್ಷಕ ದಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.