ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ


ಹೊಸಪೇಟೆ(ವಿಜಯನಗರ),ನ.22 :  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಹೊಸಪೇಟೆ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ವತಿಯಿಂದ ಶನಿವಾರದಂದು ವಿಜ್ಞಾನ ಕಾಲೇಜಿನಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಾಕ್ರಮ ನಡೆಯಿತು.
ಹೊಸಪೇಟೆ ನಗರಸಭೆ ಅಧ್ಯಕ್ಷರಾದ ಸುಂಕಮ್ಮ ಅವರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಚನ್ನಬಸಪ್ಪ ಅವರು ಮಾತನಾಡಿ, ಕಳೆದ 2 ವರ್ಷ ಕೋವಿಡ್ ಹಿನ್ನಲೆಯಲ್ಲಿ ಮಕ್ಕಳ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮಕ್ಕಳಲ್ಲಿ ಚೈತನ್ಯ ತುಂಬಲು ಹಾಗೂ ಮಕ್ಕಳ ಪ್ರತಿಭೆ ಪುರಸ್ಕಾರಕ್ಕಾಗಿ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ತಾಲೂಕಿನ 1256 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು ಇದರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವವರಿದ್ದಾರೆ. ಶಿಕ್ಷಣ ಕೇವಲ ಜ್ಞಾನ ನೀಡುವುದಕ್ಕೆ ಅಷ್ಟೇ ಅಲ್ಲ ಮಕ್ಕಳಲ್ಲಿ ಸರ್ವತೋಮುಖ ಬೆಳವಣಿಗೆ ಉಂಟು ಮಾಡುವುದು ಕೂಡ ಶಿಕ್ಷಣದ ಉದ್ದೇಶವಾಗಿದೆ. ಹಾಗಾಗಿ ಮಕ್ಕಳಲ್ಲಿರುವ ಕಲೆ, ಸಂಗೀತ, ನೃತ್ಯ, ಭಾಷಣ, ಮುಂತಾದ ಸೃಜನಾತ್ಮಕ ಚಟುವಟಿಕೆಗಳನ್ನು ಪ್ರದರ್ಶಿಸುವ ವೇದಿಕೆ ಪ್ರತಿಭಾ ಕಾರಂಜಿಯಾಗಿದೆ ಎಂದು ಹೇಳಿದರು.
ನಗರಸಭೆ ಉಪಾಧ್ಯಕ್ಷ ಎಲ್.ಎಸ್.ಆನಂದ್ ಅವರು ಮಾತನಾಡಿ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆ ಹೊಂದಿರುತ್ತಾರೆ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರ ಸೆಳೆಯಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ. ಈ ವೇದಿಕೆ ಮೂಲಕ ಮಕ್ಕಳ ಕಲೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಅಳೆದು ಪ್ರೋತ್ಸಾಹಿಸಲು ಉತ್ತಮ ಅವಕಾಶವನ್ನು ಇಲಾಖೆ ಒದಗಿಸಿದೆ. ಶಿಕ್ಷಣ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ. ಮಕ್ಕಳು ಉತ್ತಮ ಶಿಕ್ಷಣ ಪಡೆದು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಿ ಎಂದು ಶುಭ ಹಾರೈಸಿದರು.
ನಂತರ ಸ್ಪರ್ಧೆ ನಡೆಸಿ ವಿಜೇತರಿಗೆ ಸ್ಥಳದಲ್ಲಿಯೇ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ಶಿವಕುಮಾರ್, ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ್ ಜತ್ತಿ, ಕಂಪ್ಲಿಯ ಹೇಮಯ್ಯ ಸ್ವಾಮಿ, ವಿಜ್ಞಾನ ಶಾಲೆಯ ಮುಖ್ಯ ಗುರುಗಳಾದ ವಿದ್ಯಾಧರ, ಪ್ರೌಢ ಶಾಲೆಯ ಮುಖ್ಯಗುರುಗಳ ಸಂಘದ ಅಧ್ಯಕ್ಷ ಡಾ.ಅಕ್ಕಮಹಾದೇವಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ.ಕೆ. ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ತಿಮ್ಮಪ್ಪ, ರಾಜ್ಯ ಸಂಘಟನ ಕಾರ್ಯದರ್ಶಿ ನಾಗನಗೌಡ ಎಂ.ಎ. ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಕಡ್ಡಿ ವೀರಭದ್ರೇಶ್, ರಾಜ್ಯ ಪರಿಷತ್ ಸದಸ್ಯ ಎಸ್.ಬಸವರಾಜ್, ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಕುಮಾರ ಸ್ವಾಮಿ, ಸಾವಿತ್ರಿಬಾಪುಲೆ ಸಂಘದ ಜಿಲ್ಲಾಧ್ಯಕ್ಷ ಉಮಾದೇವಿ, ಶಿಕ್ಷಣ ಸಂಯೋಜಕ ಕೆ.ಮಲ್ಲೇಶಪ್ಪ ಹಾಗೂ ಹೆಚ್.ಶಿವರಾಮಪ್ಪ, ಬಡ್ತಿ ಮುಖ್ಯಗುರುಗಳ ಸಂಘದ ಅಧ್ಯಕ್ಷ ರೇಣುಕಾ ಟಪಾಲ್, ಸಂಘದ ಕಾರ್ಯದರ್ಶಿ ಮಲ್ಲಯ್ಯ, ಶೇಖರ ಗಿರಡ್ಡಿ ಸೇರಿದಂತೆ ಬಿ.ಆರ್.ಪಿ, ಸಿ.ಆರ್.ಪಿ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.