ತಾಲೂಕು ಪತ್ರಕರ್ತರಿಗೆ ವಾರಿಯರಸ್ ಸೌಲಭ್ಯ ಸೇರಿ ಆರ್ಥಿಕ ಪ್ಯಾಕೇಜ್‍ಗೆ ಒತ್ತಾಯ

ಆಳಂದ:ಜೂ.5: ರಾಜ್ಯದಲ್ಲಿನ ತಾಲೂಕು ಹಾಗೂ ಹೋಬಳಿ ಮಟ್ಟದ ಪತ್ರಕರ್ತರಿಗೆ ಕೊರೊನಾ ವಾರಿಯರಸ್‍ಗಳಿಗೆ ನೀಡುವ ಎಲ್ಲ ಸೌಲಭ್ಯಗಳು ಸೇರಿ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಲು ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ತಾಲೂಕು ಸಂಘ ಹಾಗೂ ಸುದ್ದಿವಾಹಿನಿ ಸಂಘದ ಮುಖಂಡರು ಇಂದಿಲ್ಲಿ ಒತ್ತಾಯಿಸಿದರು.

ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಶುಕ್ರವಾರ ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಬೇಡಿಕೆಯ ಮನವಿ ಸಲ್ಲಿಸಿ ಒತ್ತಾಯಿಸಿದರು.

ಕೊರೊನಾ ಭೀತಿ ಹಾಗೂ ಲಾಕ್‍ಡೌನ ಹೇರಿಕೆಯಿಂದ ದಿನದಿಂದ ದಿನಕ್ಕೆ ತೀರಾ ಸಂಕಷ್ಟದಲ್ಲಿ ಕಾಲ ಕಳೆಯುತ್ತ ಸರ್ಕಾರದೊಂದಿಗೆ ಕೋವಿಡ್ ನಿರ್ವಾಹಣೆಯಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಪ್ರಮುಖ ಕಾರ್ಯನಿರ್ವಹಿಸಲಾಗಿದೆ. ರಾಜ್ಯದಲ್ಲಿನ ಕೊರೊನಾ ವಾರಿಯರಸ್‍ಗಳಿಗೆ ನೀಡುವ ಎಲ್ಲ ಸೌಲಭ್ಯಗಳ ಜೊತೆಗೆ ವಿಶೇಷ ತುರ್ತು ಆರ್ಥಿಕ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿದರು. ಕೆಲ ವಲಯಗಳಿಗೆ ಆರ್ಥಿಕ ಪ್ಯಾಕೇಜ್ ಜೊತೆ ನ್ಯಾಯವಾದಿಗಳ ಕಲ್ಯಾಣ ನಿಧಿಗೆ 5 ಕೋಟಿ ರೂ. ನೀಡಿರುವುದು ಸಂತೋಷದ ಜೋತೆಗೆ ಸ್ವಾಗತ.’ಪತ್ರಕರ್ತರನ್ನು ಕೇವಲ ಲಸಿಕೆಗೆ ಮಾತ್ರ ಪ್ರಂಟ್ ಲೈನ್ ವರ್ಕರ್ಸ’ ಎಂದು ಸೀಮಿತಗೊಳಿಸಿರುವುದಕ್ಕೆ ಇಂದು ಘೋಷಿಸಿರುವ ಪ್ಯಾಕೇಜಿನಿಂದ ಸರ್ಕಾರ ಸಾಭೀತು ಪಡಿಸಿದೆ. ತಮ್ಮ ಪ್ರಾಣದ ಹಂಗನ್ನು ತೊರೆದು ಇಂಥ ಕೋವಿಡ್ ಪರಿಸ್ಥಿತಿಯಲ್ಲಿಯೂ ಹಗಲಿರುಳು ಶ್ರಮಿಸುತ್ತಿರುವ ಪತ್ರಕರ್ತರಿಗೆ ಸರಿಯಾದ ತನ್ನ ನಿಲುವನ್ನು ಇಂದು ವ್ಯಕ್ತಪಡಿಸದೆ. ಊಟಕ್ಕೂ ಪರದಾಡುತ್ತಿರುವ ಇಂಥ ಪರಿಸ್ಥಿತಿಯಲ್ಲಿ ಬಹಳಷ್ಟು ಪತ್ರಕರ್ತರಿಗೆ ರಾಜ್ಯದ ಉದ್ದಗಲಕ್ಕೂ ಅನೇಕ ದಾನಿಗಳು ಆಹಾರದ ಕಿಟ್ ಗಳನ್ನು ನೀಡುತ್ತಿರುವುದು ಪ್ರತಿನಿತ್ಯ ತಾವು ಟಿವಿ ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವುದನ್ನು ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಗಮನಕ್ಕಿದ್ದರು ಕಂಡು ಕಾಣದಂತೆ ಜಾಣ ಮೌನ ವಹಿಸಿರುವುದು ಪ್ರತಿಯೊಬ್ಬ ಪತ್ರಕರ್ತರ ಭಾವನೆಗೆ ಮತ್ತಷ್ಟು ನೋವು ತರಿಸಿದೆ ಎಂದು ಹೇಳಿದರು.

ರಾಜ್ಯದ ಬಹುತೇಕ ಜನರಿಗೆ ಪತ್ರಕರ್ತರ ಸಂಕಷ್ಟಗಳ ಬಗ್ಗೆ ಗೊತ್ತಿಲ್ಲ. ಅನೇಕ ದಿನ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ವರದಿಗಾರರಿಗೆ ಸಂಬಳಿಲ್ಲ, ಪತ್ರಿಕೆಗಳ ಪ್ರತಿಗಳ ಮಾರಾಟದಿಂದ ಬಂದ ಕಮೀಷ್ ನಿಂದ ಜೀವನ ಸಾಗಿಸಬೇಕಾದ ಅನಿವಾರ್ಯತೆ. ಇತ್ತ ಉಗುಳುವುದಕ್ಕೂ ನುಂಗುವುದಕ್ಕೂ ಆಗದಂತೆ ಇದೆ ಪತ್ರಕರ್ತರ ನೈಜ ಜೀವನ. ರಾಜ್ಯದಲ್ಲಿರುವ 14,000 ಸಾವಿರ ಪತ್ರಕರ್ತರಲ್ಲಿ ಕೇವಲ ಬೆರಳೆಣಿಕೆಯ 1,500 ಪತ್ರಕರ್ತರು ಮಾತ್ರ ಇರುವುದರಲ್ಲಿ ಚೆನ್ನಾಗಿದ್ದಾರೆ. ಉಳಿದಂತವರ ಪಾಡು ಆ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಪತ್ರಕರ್ತರ ಮಾನ್ಯತೆ ಪಡೆದಂತ ಪತ್ರಕರ್ತರಿಗೆ ಮಾತ್ರ ಸಂಪಾದಕ ಮಂಡಳಿ ತಿಂಗಳ ಸಂಬಳ ನೀಡುತ್ತೆ, ಇನ್ನು ಉಳಿದಂತವರಿಗೆ ಯಾವುದೇ ಸಂಬಳ, ಸೌಕರ್ಯ ಹೇಳತೀರದು. ಸರ್ಕಾರ ಬಹುಶ: ಪ್ರತಿನಿತ್ಯ ತಮ್ಮ ಸುತ್ತಾಮುತ್ತಾ ಓಡಾಡುವಂತ ಸಿರಿವಂತ ಪತ್ರಕರ್ತರನ್ನು, ಕಾರಿನಲ್ಲಿ ಓಡಾಡುವಂತವರನ್ನು ನೋಡಿ ಪತ್ರಕರ್ತರಿಗೆ ಏನು ಕಮ್ಮಿಯಾಗಿದೆ ಎಂಬ ಆಲೋಚನೆಯಲ್ಲಿ ರಾಜ್ಯಾದ್ಯಂತವಿರುವ ನಗರ ಹಾಗೂ ಗ್ರಾಮಾಂತರ ನೈಜ್ಯ ಪತ್ರಕರ್ತರ ಸ್ಥಿತಿಯನ್ನು ಮರೆತಿರುವುದು ಬಹಳ ದು:ಖದಾಯಕವಾಗಿದೆ. ಪತ್ರಕರ್ತರ ಸ್ಥಿತಿ ಅರಿತು ನಮಗೂ ಆರ್ಥಿಕ ಪ್ಯಾಕೇಜ್ ವಾರಿಯರಸ್‍ಗಳ ಸೌಲಭ್ಯ ಘೋಷಿಸಬೇಕೆಂದು ಅವರು ಮನವಿ ಸಲ್ಲಿಸಿ ಒತ್ತಾಯಿಸಿದರು. ಮನವಿ ಸ್ವೀಕರಿಸಿದ ತಹಸೀಲ್ದಾರರು ಸೂಕ್ತವಾದ ಬೇಡಿಕೆಯ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ತಕ್ಷಣವೇ ಕಳಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಪತ್ರಕರ್ತರ ಸಂಘದ ಮುಖಂಡ ಮಹಾದೇವ ವಡಗಾಂವ್, ಡಿ.ಎಮ್. ಪಾಟೀಲ್ ಶಿವಲಿಂಗ ತೆಲ್ಕರ್ ಸಂಜಯ್ ಪಾಟೀಲ್, ಶಾಂತಪ್ಪ ಕೋರೆ, ಡಾ,ರಾಜಮಾರ ಹಿರೇಮಠ ಪ್ರಭಾಕರ್ ಸಲಗರೆ, ಜಗದೀಶ ನಿರಗುಡಿ, ಶರಣಬಸಪ್ಪ ವಡಗಾಂವ, ಮಹೇಂದ್ರ ಕ್ಷೀರಸಾಗರ, ವೀರಯ್ಯ ಸ್ವಾಮಿ, ಸೂರಜ್ ಪತಂಗೆ ಮತ್ತಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.