ತಾಲೂಕು ಕಚೇರಿ ಮುಂದೆ ಅಹವಾಲು ಸ್ವೀಕರಿಸಲಿರುವ “ಕೆಆರ್‍ಎಸ್” ಪಕ್ಷ

ಸಂಜೆವಾಣಿ ವಾರ್ತೆ
ಹೊಸಪೇಟೆ, ಸೆ.14: ಹೊಸಪೇಟೆ ತಾಲೂಕನ್ನು ಭ್ರಷ್ಟಾಚಾರ ಮುಕ್ತ ತಾಲೂಕಾಗಿ ಮಾಡುವ ಉದ್ದೇಶವನ್ನು ಕರ್ನಾಟಕ ರಾಷ್ಟ್ರ ಸಮಿತಿ ಸಂಕಲ್ಪಿಸಿದೆ ಎಂದು ವಿಜಯನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ.ಯ.ಗಣೇಶ್ ಹೇಳಿದರು.
ಸೋಮವಾರ ಹೊಸಪೇಟೆ ತಾಲೂಕು ಕಚೇರಿಯ ಮುಂದೆ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ಕೆ ಚಾಲನೆ ನೀಡಿದ ಅವರು ಇಂದಿನಿಂದ ಪ್ರತಿ ಸೋಮವಾರ ಅಹವಾಲು ಸ್ವೀಕಾರ ಮಾಡಲಾಗುವುದು,  ಯಾವುದೆ ಸಾರ್ವಜನಿಕರು ಯಾವುದೆ ಸರ್ಕಾರಿ ಇಲಾಖೆಯಲ್ಲಿ ತಮ್ಮ ಕಾರ್ಯಕ್ಕೆ ವಿಳಂಬ ಅನಗತ್ಯವಾಗಿ ತೊಂದರೆ ನೀಡಿದರೆ ನಮ್ಮ ಪಕ್ಷದ ಕಾರ್ಯಕರ್ತರು ಬಂದು ಆ ಇಲಾಖೆಯಲ್ಲಿ ಕಾರ್ಯ ಸುಗಮಕ್ಕೆ ಸಹಾಯ ಮಾಡಲಿದ್ದಾರೆ. ಇಂತಹ ಕಾರ್ಯಗಳ ಮೂಲಕ ನಮ್ಮ ಪಕ್ಷ ರಾಜ್ಯದ ಇತರೆ ರಾಜಕೀಯ ಪಕ್ಷಗಳಿಗಿಂತ ವಿಭಿನ್ನವಾಗಿ ನಿಲ್ಲಲಿದೆ ಎಂದರು.
ಸದ್ಯದ ಆಡಳಿತ ಪರಿಸ್ಥಿತಿಯಲ್ಲಿ ಪ್ರತಿ ಇಲಾಖೆಯಲ್ಲಿಯೆ ನಿಗ್ರಹ ದಳಗಳಿದ್ದರೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲಾ, ಬ್ರಷ್ಟಾಚಾರ ನಿಗ್ರಹದಳ, ಲೋಕಾಯುಕ್ತ ಇದ್ದರೂ ಭ್ರಷ್ಟಾಚಾರ ನಿಲ್ಲದ ಕಾರಣ ಈ ಕಾರ್ಯಕ್ಕೆ ಪಕ್ಷ ಮುಂದಾಗಿದೆ ಎಂದರು.
ವಿಜಯನಗರ ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಮಾತನಾಡಿ ರಾಜ್ಯದ ಇತರೆ ಪ್ರದೇಶಗಳಲ್ಲಿ ನಮ್ಮ ಪಕ್ಷ ಇಂತಹ ಕಾರ್ಯಕ್ಕೆ ಮುಂದಾಗುವ ಮೂಲಕ ಅನೇಕ ಭ್ರಷ್ಟ ಅಧಿಕಾರಿಗಳಿಗೆ ದುಸ್ವಪ್ನವಾಗಿದ್ದಾರೆ, ಈ ಸಾಧನೆಯ ಪ್ರಯೋಜನ ಪಡೆದು ಹೊಸಪೇಟೆ ತಾಲೂಕಿನ ಜನರು ಸಹ ಲಾಭಪಡೆಯಬೇಕು ಎಂದರು.
ಹೊಸಪೇಟೆ ತಾಲೂಕು ಘಟಕದ ಅಧ್ಯಕ್ಷ ಬಿ. ವೆಂಕಟರಮಣ ಮಾತನಾಡಿದರು. ಉಪಾಧ್ಯಕ್ಷ ಪಿ. ಅಂಜಿನಿ, ಪ್ರಧಾನ ಕಾರ್ಯದರ್ಶಿ ದಲ್ಲಾಳಿ ಹುಸೇನ್ ಮೌಲ, ಸಂಘಟನಾ ಕಾರ್ಯದರ್ಶಿ ತಾಡೂರು ವಿರೂಪಾಕ್ಷ, ಮಡಿವಾಳ ಯಲ್ಲಪ್ಪ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಬಿ. ಮಹಮ್ಮದ್ ಅಲಿ, ರೈತ ಘಟಕದ ಚಲವಾದಿ ಆನಂದ ಪಾಲ್ಗೊಂಡಿದ್ದರು.