ತಾಲೂಕು ಆಸ್ಪತ್ರೆಗೆ ಸಚಿವ ಅಂಗಾರ ಭೇಟಿ: ಕೋವಿಡ್ ಪರೀಕ್ಷಾ ಕೇಂದ್ರ ಬೇರೆ ಕಡೆಗೆ ಸ್ಥಳಾಂತರದ ಬಗ್ಗೆ ಚರ್ಚೆ

ಸುಳ್ಯ, ಮೇ ೨೭- ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಸೋಮವಾರ ಭೇಟಿ ನೀಡಿದರು. ಆಸ್ಪತ್ರೆಯ ಚಿಕಿತ್ಸಾ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಆಸ್ಪತ್ರೆಯ ವೈದ್ಯರುಗಳು, ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ಜೊತೆ ಸಚಿವರು ಸಮಾಲೋಚನೆ ನಡೆಸಿದರು. ತಾಲೂಕು ಆಸ್ಪತ್ರೆಯಲ್ಲಿ ಶಂಕಿತ ಕೋವಿಡ್ ರೋಗಿಗಳ ಮತ್ತು ಇತರ ರೋಗಿಗಳ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಎಲ್ಲಾ ರೋಗಿಗಳು ಇಲ್ಲಿ ಬರುವ ಕಾರಣ ಶಂಕಿತ ಕೋವಿಡ್ ರೋಗಿಗಳು ಇದ್ದರೆ ಅವರಿಂದ ಇತರರಿಗೂ ಸೋಂಕು ಹರಡುವ ಸಾಧ್ಯತೆ ಇದೆ. ಆದುದರಿಂದ ಶಂಕಿತ ಕೋವಿಡ್ ರೋಗಿಗಳ ಪರೀಕ್ಷಾ ಕೇಂದ್ರವನನ್ನು ಪ್ರತ್ಯೇಕವಾಗಿ ಸ್ಥಾಪಿಸುವ ಬಗ್ಗೆ ಚರ್ಚೆ ನಡೆಸಲಾಯಿತು. ತಾಲೂಕು ಆಸ್ಪತ್ರೆಯನ್ನು ಪೂರ್ತಿಯಾಗಿ ಕೋವಿಡ್ ಆಸ್ಪತ್ರೆ ಮಾಡಿ ಇತರ ಚಿಕಿತ್ಸಾ ಕೇಂದ್ರವನ್ನು ಬೇರೆ ಕಡೆ ಸ್ಥಳಾಂತರಿಸುವುದು ಅಥವಾ ಕೋವಿಡ್ ಪರೀಕ್ಷೆ ಮತ್ತು ಚಿಕಿತ್ಸೆಗೆ ಬೇರೆ ಸ್ಥಳ ಗುರುತಿಸುವ ಬಗ್ಗೆ ಚರ್ಚೆ ನಡೆಸಲಾಯಿತು. ಈ ಕುರಿತು ನಾಳೆ ಮತ್ತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಉದ್ಯಾನವನ ಆಸ್ಪತ್ರೆಯ ಆಂಬುಲೆನ್ಸ್ ಮತ್ತು ವಾಹನಗಳನ್ನು ಬಳಸಿ ಕೆಎಫ್ ಡಿಸಿ ಕಾರ್ಮಿಕರು ಇರುವ ಕಾಲನಿಗಳಲ್ಲಿ ಕೋವಿಡ್ ಪರೀಕ್ಷೆ ನಡೆಸಲು ಸಚಿವರು ಸೂಚಿಸಿದರು. ಸುಳ್ಯದಲ್ಲಿ ಎರಡು ಹಾಸ್ಟೇಲ್ ಗಳನ್ನು ಕೋವಿಡ್ ಪಾಲನಾ ಕೇಂದ್ರವನ್ನಾಗಿ ಗುರುತಿಸಲಾಗಿದ್ದರೂ ಅಲ್ಲಿ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹೇಳಿದರು.
ಆಸ್ಪತ್ರೆಯಲ್ಲಿ ಆಕ್ಸಿಜನ್ ಮತ್ತಿತರ ವ್ಯವಸ್ಥೆಗಳ ಬಗ್ಗೆ ಸಚಿವರು ಮಾಹಿತಿ ಪಡೆದರು. ತಹಶಿಲ್ದಾರ್ ಅನಿತಾಲಕ್ಷ್ಮಿ, ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ ಕೆ.ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಭವಾನಿಶಂಕರ, ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್, ಪ್ರಮುಖರಾದ ರಾಧಾಕೃಷ್ಣ ಬೊಳ್ಳೂರು, ಸುಬೋದ್ ಶೆಟ್ಟಿ ಮೇನಾಲ, ಸುಧಾಕರ ತೊಡಿಕಾನ ಮತ್ತಿತರರು ಉಪಸ್ಥಿತರಿದ್ದರು.