ತಾಲೂಕು ಆಸ್ಪತ್ರೆಗೆ ಕಾಯಕಲ್ಪ ಪ್ರಶಸ್ತಿ

ಬಾದಾಮಿ, ಏ 10: ತಾಲೂಕಾ ಆಸ್ಪತ್ರೆಯ ಸೇವೆಯನ್ನು ಪರಿಗಣಿಸಿ ಕಾಯಕಲ್ಪ ಪ್ರಶಸ್ತಿ ದೊರೆತಿರುವುದು ಎಲ್ಲ ವೈದ್ಯರ, ಸಿಬ್ಬಂದಿಯ ಪ್ರತಿಫಲವಾಗಿದೆ. ಇನ್ನು ಹೆಚ್ಚಿನ ಪ್ರಶಸ್ತಿ ಸಿಗಲಿ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಪಿ.ಎ.ಹಿಟ್ನಳ್ಳಿ ಹೇಳಿದರು.
ಅವರು ನಗರದ ತಾಲೂಕಾ ವೈದ್ಯಾಧಿಕಾರಿಗಳ ಕಾರ್ಯಾಲಯದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕಾಯಕಲ್ಪ ಪ್ತಶಸ್ತಿ ಮತ್ತು ತಾಲೂಕಾಸ್ಪತ್ರೆ ಸಿಬ್ಬಂದಿ ಬೀಳ್ಕೊಡುಗೆ ಮತ್ತು ವರ್ಗಾವಣೆಯಾಗಿ ಬಂದಿರುವ ಸಿಬ್ಬಂದಿ ಸ್ವಾಗತ ಕೋರುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ತಾಲೂಕಾ ವೈದ್ಯಾಧಿಕಾರಿ ಡಾ.ಎಂ.ಬಿ.ಪಾಟೀಲ ಮಾತನಾಡಿ ಆಸ್ಪತ್ರೆಯಲ್ಲಿನ ಸ್ವಚ್ಚತೆ, ಹೊರಾಂಗಣ ವ್ಯವಸ್ಥೆ, ಆರೋಗ್ಯ ಶಿಕ್ಷಣ ಕಾರ್ಯಕ್ರಮ, ರೋಗಿಗಳ ಆರೈಕೆ ಮತ್ತು ಚಿಕಿತ್ಸೆ, ಆರೋಗ್ಯ ಕೇಂದ್ರದ ದಾಖಲಾತಿ, ನಿರ್ವಹಣೆ, ಆಸ್ಪತ್ರೆಯಲ್ಲಿನ ಸೇವೆ ಮತ್ತು ಸೌಕರ್ಯಗಳನ್ನು ಪರಿಶೀಲಿಸಿ ಬಾಗಲಕೋಟ ಜಿಲ್ಲೆಯ 2019-20 ನೇ ಸಾಲಿನ ಉತ್ತಮ ತಾಲೂಕಾ ಆಸ್ಪತ್ರೆ ಎಂದು ನಮ್ಮ ಬಾದಾಮಿ ಆಸ್ಪತ್ರೆಗೆ ಕಾಯಕ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ತಾಲೂಕಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಬಿ.ಎಚ್.ರೇವಣಸಿದ್ದಪ್ಪ ಮಾತನಾಡಿ ನಮ್ಮದು ಆರೋಗ್ಯ ಸೇವೆ. ಎಲ್ಲ ಸಿಬ್ಬಂದಿ, ವೈದ್ಯರ ಶ್ರಮದಿಂದ ಪ್ರಶಸ್ತಿ ಬಂದಿದೆ ಸಂತೋಷ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಮಾಡಿ ನಮ್ಮ ಆಸ್ಪತ್ರೆಯನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವರ್ಗಾವಣೆಗೊಂಡಿರುವ ಡಾ.ಪಿ.ಕೆ.ಶಾಂತಗೌಡ್ರ, ಡಾ.ವೀಣಾ ಜೋಶಿ, ಎ.ಜಿ.ನೀಲವಾಣಿ, ರೇಣುಕಾ ಮಲ್ಲಪ್ಪಗೋಳ, ಕಸ್ತೂರಿಬಾಯಿ ಕೆಂದೂರ, ಲಕ್ಷ್ಮೀ ನೀಲನಾಯಕ, ನಾಗೇಶ ತೆಂಗಿನಕಾಯಿ, ಬೀರೇಶ ನಾಗಮ್ಮನವರ, ಮಕಾನದಾರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಬೇರೆ ಆಸ್ಪತ್ರೆ, ಕಚೇರಿಯಿಂದ ಬಾದಾಮಿ ತಾಲೂಕಾಸ್ಪತ್ರೆಗೆ ವರ್ಗಾವಣೆಯಾಗಿ ಬಂದಿರುವ ಸಿಬ್ಬಂದಿ, ವೈದ್ಯರನ್ನು ಸ್ವಾಗತಿಸಲಾಯಿತು. ಮುಖಂಡ ಅಶೋಕ ಕೋಟನಕರ ಮಾತನಾಡಿದರು. ವೇದಿಕೆಯ ಮೇಲೆ ಡಾ.ಆರ್.ಎಸ್.ಸನ್ನಿ, ಡಾ.ಜಯಂತಕುಮಾರ, ಡಾ.ಶಂಕರ ಉಡಚಂಚಿ ಹಾಜರಿದ್ದರು. ರಾಜು ಅಂಬಿಗೇರ ಸ್ವಾಗತಿಸಿದರು. ಹಿರಿಯ ಆರೋಗ್ಯ ನಿರೀಕ್ಷಕ ಪಿ.ಎಚ್.ಮಹಾಲಿಂಗಪೂರ ಪ್ರಾಸ್ಥಾವಿಕವಾಗಿ ಮಾತನಾಡಿದರು. ಆರೋಗ್ಯ ಶಿಕ್ಷಣಾಧಿಕಾರಿ ಜಿ.ವಿ.ಜೋಶಿ ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾರ್ಜುನ ಅಂಗಡಿ ವಂದಿಸಿದರು.