ಅರಕೇರಾ,ಜು.೧೫-
ಪಟ್ಟಣದಲ್ಲಿ ತಾಲೂಕು ಆಡಳಿತ ಭವನ ನಿರ್ಮಾಣಕ್ಕಾಗಿ ವಿವಿಧ ಸರ್ಕಾರಿ ಜಾಗವನ್ನು ಎಸಿ ಮಹಿಬೂಬಿ ಇಲಾಖೆಯ ಅಧಿಕಾರಿಗಳೊಂದಿಗೆ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದರು.
ಅರಕೇರಾ ತಾಲೂಕು ಕೇಂದ್ರಕ್ಕೆ ಅವಶ್ಯವಿರುವ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಪಟ್ಟಣದ ಆದರ್ಶ ವಿದ್ಯಾಲಯ, ಮಾನಯ್ಯನ ದೊಡ್ಡಿ ಹಾಗೂ ಜುಟಮರಡಿ ಬಳಿಯ ಸರ್ಕಾರಿ ಜಾಗವನ್ನು ಪರಿಶೀಲಿಸಿದರು. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆ, ಸಾರಿಗೆ ಸಂಪರ್ಕವಿರುವ ಕಡೆ ಆಯ್ಕೆ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಗುರುತಿಸಿದ ಸ್ಥಳದ ಸರ್ವೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕು ಕೇಂದ್ರಕ್ಕೆ ಅವಶ್ಯವಿರುವ ಮೂಲ ಸೌಕರ್ಯ ಒದಗಿಸಲು ಹೆಚ್ಚಿನ ಕ್ರಮ ವಹಿಸಲಾಗುವುದು. ಈಗಾಗಲೇ ತಾಲೂಕಿಗೆ ತಹಸೀಲ್ದಾರ್ ಸೇರಿದಂತೆ ಕೆಲ ಸಿಬ್ಬಂದಿಗಳ ನೇಮಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಹಂತ ಹಂತವಾಗಿ ಉಳಿದ ಸಿಬ್ಬಂದಿಗಳ ಭರ್ತಿಯಾಗುವುದು. ತಾಲೂಕು ವ್ಯಾಪ್ತಿಯ ವಿವಿಧ ಇಲಾಖೆಗಳ ಕಚೇರಿಗಳಿಗೆ ನಾಮ ಫಲಕದಲ್ಲಿ ತಾಲೂಕು ಅರಕೇರಾ ಎಂದು ನಮೂದಿಸಲು ಈಗಾಗಲೇ ಸೂಚನೆ ನೀಡಲಾಗಿದ್ದು, ಕೆಲ ಕಚೇರಿಗಳಲ್ಲಿ ಮಾತ್ರ ಕಾರ್ಯಗತವಾಗಿದೆ. ಬದಲಾವಣೆ ಮಾಡಿಕೊಳ್ಳದ ಕಚೇರಿಯವರು ನಾಮ ಫಲಕದಲ್ಲಿ ಬದಲಾವಣೆ ಮಾಡುವಂತೆ ಆದೇಶಿಸಲಾಗುವುದು.
ವಿವಿಧ ಕಚೇರಿಗಳಿಗೆ ಭೇಟಿ :
ಪಟ್ಟಣದ ತಹಸೀಲ್ ಕಚೇರಿ, ಆದರ್ಶ ವಿದ್ಯಾಲಯ, ಗ್ರಾಪಂ ಕಾರ್ಯಾಲಯಗಳಿಗೆ ಭೇಟಿ ನೀಡಿ, ಸಿಬ್ಬಂದಿ ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಗುಣಮಟ್ಟ ಬೋಧನೆ, ಮಧ್ಯಾಹ್ನದ ಬಿಸಿಯೂಟ ಸೇರಿ ಇತರ ಸೌಲಭ್ಯಗಳು ಸಮರ್ಪಕವಾಗಿ ಮುಟ್ಟಿಸಬೇಕು. ಸಾರ್ವಜನಿಕರ ಕುಂದು ಕೊರತೆಗಳನ್ನು ಸ್ಥಳೀಯ ಆಡಳಿತ ಉತ್ತಮವಾಗಿ ನಿಭಾಯಿಸುತ್ತಿದೆಯೇ ಎಂದು ಸಾರ್ವಜನಿಕರಿಂದ ಮಾಹಿತಿ ಪಡೆದರು. ಕಚೇರಿಗಳಲ್ಲಿ ಸ್ವಚ್ಛತೆ ಹಾಗೂ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಸೂಚಿಸಿದರು.
ತಹಸೀಲ್ದಾರ್ ಯಲ್ಲಪ್ಪ ಸುಬೇದಾರ್, ಶಿರಸ್ತೇದಾರ್ ಮನೋಹರ ನಾಯಕ, ಕಂದಾಯ ನಿರೀಕ್ಷಕ ಬಸವರಾಜ ಹೂನೂರು, ವಿಷಯ ನಿರ್ವಾಹಕ ಕನಕರೆಡ್ಡಿ, ಗ್ರಾಮ ಲೆಕ್ಕಾಧಿಕಾರಿಗಳಾದ ಮಲ್ಲಪ್ಪ ಜಾಗಟಗಲ್, ಅರುಣ, ಕೆಂಚಬಸಪ್ಪ, ವೆಂಕಟೇಶ ಇತರರಿದ್ದರು.