ತಾಲೂಕು ಆಡಳಿತದಿಂದ 65ನೇ ಕನ್ನಡ ರಾಜ್ಯೋತ್ಸವ ಆಚರಣೆ

ಹೊಸಪೇಟೆ ನ 01 : ತಾಲೂಕಿನ ಯುವವಾಗ್ಮಿಗಳಿಗೆ ಅವಕಾಶ ಕಲ್ಪಿಸುವ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಕುವೆಂಪುರವರ ಸಮಗ್ರ ಸಾಹಿತ್ಯ ಸಂಪುಟವನ್ನು ಒದಗಿಸಿ ಕನ್ನಡ ನಾಡುನುಡಿ ಸಾಹಿತ್ಯಕ್ಕೆ ತಹಶೀಲ್ದಾರರ ಕೊಡುಗೆಯು ಅನನ್ಯವಾಗಿದೆ ಕನ್ನಡ ಸಾಹಿತ್ಯ ಪರಿಷತ್ತು ಹೊಸಪೇಟೆ ಘಟಕದ ಅಧ್ಯಕ್ಷರಾದ ಡಾ.ಎತ್ನಳ್ಳಿ ಮಲ್ಲಯ್ಯ ಅವರು ಮಾತನಾಡಿದರು.
65ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಲೂಕು ಕಚೇರಿಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಆಡಳಿತದಲ್ಲಿ ಕನ್ನಡೀಕರಣಕ್ಕೆ ಒತ್ತು ನೀಡುವ ಜೊತೆಗೆ ತಾಲೂಕಿನಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಒತ್ತಾಯಿಸಿ ಬೇಡಿಕೆ ಸಲ್ಲಿಸಿದಾಗ ತಹಶೀಲ್ದಾರ್ ಅವರು ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದರು. ಅದೇ ರೀತಿಯಾಗಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಕುವೆಂಪು ಸಮಗ್ರ ಸಾಹಿತ್ಯವನ್ನು ಒದಗಿಸಿಕೊಟ್ಟರು. ಯುವ ವಾಗ್ಮಿಗಳಿಗೆ ಅವಕಾಶ ಕೊಡುವ ಸೂಕ್ಷ್ಮದೃಷ್ಠಿ ತಹಶೀಲ್ದಾರರಿಗೆ ಇದೆ. ಕನ್ನಡ ಭಾಷೆ ಬಳಕೆಯಾಗುವ ಜೊತೆಗೆ ಮಾತೃಭಾಷಾಭಿಮಾನ ಎಲ್ಲರಿಗೂ ಬೆಳೆಯಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ಹೆಚ್.ವಿಶ್ವನಾಥ್ ಅವರು ರಾಷ್ಟ್ರದ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು ದೇಶದ ಸ್ವತಂತ್ರಗೊಂಡ ನಂತರ ಮೈಸೂರು ರಾಜ್ಯವಾಗಿತ್ತು, ಅದರ ಜೊತೆ ಕನ್ನಡ ನಾಡು ಬಿಡಿಬಿಡಿಯಾಗಿತ್ತು. ನಾಲ್ಕು ಪ್ರಾಂತ್ಯಗಳನ್ನು.ಒಗ್ಗೂಡಿಸಿ 1956 ರಾಜ್ಯ ನಿರ್ಮಾಣವಾಯಿತು. ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರಿಂದ ಕನ್ನಡ ಚಳುವಳಿ ಆರಂಭವಾಯಿತು. ಕನ್ನಡದ ಏಳಿಗೆಗಾಗಿ ಹಲವಾರು ಮಹನೀಯರ ಹೋರಾಟದ ಮೂಲಕ ಸೇವೆಸಲ್ಲಿಸಿದ್ದಾರೆ. ಅನ್ಯ ಭಾಷೆಗಳಿಗೆ ಹೋಲಿಸಿದರೆ ಪ್ರಾಚೀನ ಭಾಷೆ ನಮ್ಮ ಕನ್ನಡವಾಗಿದೆ. ಕನ್ನಡ ಸಾಹಿತ್ಯದ ಪೋಷಣೆ ಜೊತೆಗೆ ಸಂಸ್ಕೃತಿ ಸಂಸ್ಕಾರವನ್ನು ಉಳಿಸಿ ಬೆಳೆಸಿದ ಎಲ್ಲರಿಗೂ ವಂದನೆಗಳನ್ನು ಈ ಮೂಲಕ ಸಲ್ಲಿಸಬೇಕಿದೆ ಎಂದು ಮಾತನಾಡಿದರು.
ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಮೌನೇಶ್ ಬಡಿಗೇರ್ ಅವರು
ಮಹಾಭಾರತದ ಭೀಷ್ಮ ಪರ್ವದಲ್ಲಿ ಕರನಾಟ ಎಂದು ನಾಡಿನ ಉಲ್ಲೇಖವಿದೆ. ಪಂಪನು ತನ್ನ ಆದಿಪುರಾಣದಲ್ಲಿ ಕಾವೇರಿಯಿಂದ ಗೋದಾವರಿವರೆಗೂ ಕನ್ನಡ ನಾಡು ಹಬ್ಬಿತ್ತು ಎಂದಿದ್ದಾನೆ. ಬ್ರಿಟೀಷರ ಆಳ್ವಿಕೆಯ ನಂತರ ಸ್ವಾತಂತ್ರ ಸಿಕ್ಕ ಆರಂಭದಲ್ಲಿ ಭಾಷೆಗಳಿಗೆ ಅನುಸಾರವಾಗಿ ಪ್ರತ್ಯೇಕ ರಾಜ್ಯಮಾಡಲು ಯೋಚಿಸಲಾಯಿತು. ಭಾಷಾವಾರು ಪ್ರಾಂತ್ಯ ವಿಂಗಡನೆ ಬಳಿಕ ಕನ್ನಡದ ವಿಚಾರಧಾರೆಗಳನ್ನು ಸಾಹಿತ್ಯದ ಮೂಲಕ ಪ್ರಸ್ತುತ ಪಡಿಸಲು ಕನ್ನಡದ ಕವಿಗಳು ತಮ್ಮದೇ ಕೊಡುಗೆಗಳನ್ನು ನೀಡಿದರು.ಹೊಸಪೇಟೆಯ ನಾಗನಗೌಡ ಸೇರಿದಂತೆ ಅನೇಕರು ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಭಾಗವಹಿಸಿದರು. ಪ್ರಸ್ತುತ ಕನ್ನಡಿಗರಿಗೆ ಭಾಷೆಯ ಉಳಿವಿಗಾಗಿ ಆತ್ಮಾವಲೋಕನ ಬೇಕಿದೆ, ರಾಜ್ಯ ಎದುರಿಸುತ್ತಿರುವ ಆತಂಕಗಳು ಜೊತೆಗೆ ಜಾಗತೀಕರಣ ಪ್ರಭಾವವೂ ಭಾಷೆಗೆ ತನ್ನದದೇ ಪರಿಣಾಮಗಳನ್ನು ಒಳಪಡಿಸುತ್ತಿವೆ. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯವಾಗಬೇಕು. ಭಾಷೆಯ ಬಗೆಗಿನ ದ್ವಂದ್ವ ನಿಲುವು ಹಾಗೂ ಇಂಗ್ಲೀಷ್ ವ್ಯಾಮೋಹಕ್ಕೆ ಒಳಗಾಗದೇ ಭಾಷೆಯನ್ನು ಬೆಳೆಸಬೇಕು. ಕನ್ನಡ ಭಾಷೇ ಉದ್ಯೋಗದ ಭಾಷೆಯಾಗುವುದರ ಜೊತೆ ಅನ್ನದ ಭಾಷೆಯಾಗಿ ಬೆಳೆಯಬೇಕು ಇದಕ್ಕೆ
ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಜೊತೆಗೆ ಕನ್ನಡಿಗರು ಕನ್ನಡದ ಗಡಿಪ್ರದೇಶದ ಕನ್ನಡ, ಶಾಲೆಗಳ ಸ್ಥಿತಿಗತಿಯನ್ನು ಗಮನಿಸಿ ಮೂಲ ಸೌಲಭ್ಯ ಒದಗಿಸಬೇಕು, ಉದ್ಯೋಗ ಮಿಸಲಾತಿಯ ಸರೋಜಿನಿ ಮಹಿಷಿ ವರದಿ ಪ್ರಭಾವವಾಗಿ ಜಾರಿಯಾಗಬೇಕು ಎಂದು ಉಪನ್ಯಾಸದಲ್ಲಿ ಉಲ್ಲೇಖಿಸಿದರು.
ಕಾರ್ಯಕ್ರಮದಲ್ಲಿ ತಾಲೂಕಿನ ಕನ್ನಡ ಹೋರಾಟಗಾರಿದ್ದ ಪಾಂಡುರಂಗ ಹವಲ್ದಾರ್ ಅವರು ಕೋವಿಡ್19ನಿಂದ ಮೃತಪಟ್ಟ ಹಿನ್ನಲೆಯಲ್ಲಿ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ವಿಕಾಸ ಯುವಕ ಮಂಡಳಿ, ಸ್ಪೂರ್ತಿ ವೇದಿಕೆ ಹಾಗೂ ಸರಕಾರಿ ನೌಕರರ ಸಂಘದ ಸದಸ್ಯರು ವಡಕರಾಯನ ದೇವಸ್ಥಾನದಿಂದ ಕನ್ನಡ ಜ್ಯೋತಿಯನ್ನು ತಂದು ಪ್ರತಿಷ್ಠಾಪಿಸಿದರು.
ನಂತರ ವೇದಿಕೆ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತರಾದ ಜಯಲಕ್ಷ್ಮೀ, ತಾಪಂ ಕಾರ್ಯನಿರ್ವಹಣಾಧಿಕಾರಿ ಆರ್.ಕೆ.ಶ್ರೀಕುಮಾರ್, ತಾಪಂ ಅಧ್ಯಕ್ಷರಾದ ನಾಗವೇಣಿ ಬಸವರಾಜ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುನಂದಾ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು, ತಾಲೂಕು ಕಚೇರಿಯ ಸಿಬ್ಬಂದಿಗಳು ಹಾಗೂ ಕನ್ನಡ ಪರ ಸಂಘಟನೆಯ ಅಧಿಕಾರಿಗಳು ಇದ್ದರು.