ತಾಲೂಕು ಆಡಳಿತದಿಂದ ಮತದಾನ ಜಾಗೃತಿ ಜಾಥಾ

ತಿ.ನರಸೀಪುರ: ಏ.26:- ವಿಧಾನ ಸಭಾ ಕ್ಷೇತ್ರದಲ್ಲಿ ಮತದಾನ ಹೆಚ್ಚಳ ಮಾಡುವ ಉದ್ದೇಶದಿಂದ ಮತದಾನ ಜಾಗೃತಿ ಜಾಥಾವನ್ನು ತಾಲೂಕು ಆಡಳಿತ ವತಿಯಿಂದ ನಡೆಸಲಾಯಿತು.
ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣಇಲಾಖೆ, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ,ಹಿಂದುಳಿದ ವರ್ಗಗಳ ಇಲಾಖೆಗಳ ಸಹಯೋಗದಲ್ಲಿ ನಡೆದ ಜಾಥಾ ಕಾರ್ಯಕ್ರಮವು ತಾಲೂಕು ಪಂಚಾಯಿತಿ ಕಚೇರಿಯ ಅವರಣದಿಂದ ಆರಂಭಗೊಂಡು ಜನ ಜಾಗೃತಿ ಜಾಥಾ ವಿದ್ಯೋದಯ ವೃತ್ತದ ಮಾರ್ಗವಾಗಿ ಪಟ್ಟಣದ ಪ್ರಮುಖ ರಸ್ತೆಗಳ ಸಂಚರಿಸಿ ಗುಂಜಾ ನರಸಿಂಹಸ್ವಾಮಿ ದೇಗುಲದ ಆವರಣದಲ್ಲಿ ಮಾನವ ಸರಪಳಿ ರಚಿಸಿ ಕ್ಷೇತ್ರದ ಜನತೆಗೆ ಕಡ್ಡಾಯ ಮತದಾನ ಮಾಡುವಂತೆ ಅರಿವು ಮೂಡಿಸಲಾಯಿತು.
ಜಾಥಾವನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸಿ.ಕೃಷ್ಣ,ಕ್ಷೇತ್ರದಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಳ ಮಾಡುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮತದಾನ ಒಂದು ಸಂವಿಧಾನಿಕ ಹಕ್ಕು. ಕ್ಷೇತ್ರದ ಪ್ರತಿ ಮತದಾರನು ತಪ್ಪದೇ ಮತದಾನ ಮಾಡುವಂತೆ ಮನವಿ ಮಾಡಿದರು.
ಜಾಥಾದಲ್ಲಿ ಸಮಾಜ ಕಲ್ಯಾಣಾಧಿಕಾರಿ ರಾಮೇಗೌಡ, ಹಿಂದುಳಿದ ವರ್ಗಗಳ ಸಹಾಯಕ ನಿರ್ದೇಶಕ ವಿಶ್ವನಾಥ್,ರಾಜಣ್ಣ, ನರೇಗಾ ಸಹಾಯಕ ನಿರ್ದೇಶಕ ಶಶಿಕುಮಾರ್, ವಿವಿಧ ಇಲಾಖೆಯ ಅಧಿಕಾರಿಗಳಾದ ವೆಂಕಟಶೆಟ್ಟಿ, ಮಹಾದೇವ ಮೂರ್ತಿ, ಶಿವಮೂರ್ತಿ ಇತರರು ಹಾಜರಿದ್ದರು.