ತಾಲೂಕು ಆಡಳಿತದಿಂದ ಅದ್ಧೂರಿ ಕನ್ನಡ ರಾಜ್ಯೋತ್ಸವ

ತಿ.ನರಸೀಪುರ: ನ.02:- ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ 67ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್, ಪುರಸಭೆ, ವಿದ್ಯೋದಯ ಶಾಲೆಗಳಲ್ಲೂ ಕರುನಾಡ ಹಬ್ಬವಾದ 67ನೇ ಕನ್ನಡ ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಲಾಯಿತು.
ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಎಂ.ಅಶ್ವಿನ್ ಕುಮಾರ್ ಧ್ವಜಾರೋಹಣ ಮಾಡಿ ಕನ್ನಡ ನಾಡಿನ ಜನತೆಗೆ ಶುಭಕೋರಿದರು.
ನಂತರ ಮಾತನಾಡಿದ ಅವರು,ಕನ್ನಡ ಅತ್ಯಂತ ಪ್ರಬುದ್ಧ ಭಾಷೆ.ಹಾಗಾಗಿ ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ.ಸರ್ಕಾರ ಕನ್ನಡ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಬೇಕು.ಎಲ್ಲ ಇಲಾಖಾ ವ್ಯವಹಾರಗಳು ಕನ್ನಡದಲ್ಲೇ ನಡೆಯಬೇಕು ಎಂಬ ಕಾನೂನು ಜಾರಿಯಾಗಬೇಕು ಎಂದರು.
ಗ್ರಾಮೀಣ ಪ್ರದೇಶದ ಜನರು ಕನ್ನಡ ಭಾಷೆಯನ್ನು ಉಳಿಸುವಲ್ಲಿ ಮುಂಚೂಣಿಯಲ್ಲಿದ್ದು, ನಗರ ಪ್ರದೇಶಗಳಲ್ಲಿ ಕನ್ನಡ ಭಾಷೆಯ ಬಳಕೆ ಕಡಿಮೆಯಾಗಿದೆ. ಹಾಗಾಗಿ ಕನ್ನಡವನ್ನು ಕನ್ನಡಿಗರು ಬಳಸಬೇಕು ಎಂದರು.
ಶ್ರೀಗುಂಜಾ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಕನ್ನಡ ರಾಜ್ಯೋತ್ಸವ ಮೆರವಣಿಗೆಗೆ ತಹಶೀಲ್ದಾರ್ ಸಿ.ಜಿ. ಗೀತಾ ಚಾಲನೆ ನೀಡಿದರು.ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸ್ತಬ್ಧ ಚಿತ್ರ,ವೀರಗಾಸೆ ಮತ್ತು ವಾದ್ಯವೃಂದಗಳೊಂದಿಗೆ ಮೆರೆವಣಿಗೆಯು ಭಗವಾನ್ ಚಿತ್ರಮಂದಿರ,ಖಾಸಗಿ ಬಸ್ ನಿಲ್ದಾಣ,ವಿದ್ಯೋದಯ ವೃತ್ತದ ಮಾರ್ಗವಾಗಿ ತಾಲೂಕು ಕಚೇರಿ ಮುಂದೆ ನಿರ್ಮಿಸಲಾಗಿದ್ದ ವೇದಿಕೆ ತಲುಪಿತು.ಸೇಂಟ್ ಮೇರಿಸ್,ಲಿಟಲ್ ಫ್ಲವರ್,ಎನ್.ಕೆ. ಎಫ್.ಶಾಲೆ, ವಿದ್ಯೋದಯ ಶಾಲೆ, ಸೆಂಟ್ ನೊಬಾರ್ಟ್ ಮತ್ತು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಕನ್ನಡದ ಮಹತ್ವ ಸಾರುವ ಹಲವು ಕನ್ನಡ ಗೀತೆಗಳಿಗೆ ನೃತ್ಯ ಕಾರ್ಯಕ್ರಮ ನೀಡಿ ನೆರೆದಿದ್ದ ಕನ್ನಡಾಭಿಮಾನಿಗಳನ್ನು ರಂಜಿಸಿದರು.
ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ,ಗೀತಾ ಗಾಯನ ಮತ್ತು ಕವಿಗೋಷ್ಠಿಯ ವಿಜೇತರಿಗೆ ಸನ್ಮಾನವನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕನ್ನಡ ಪುಟ್ಟಸ್ವಾಮಿ,ಪುರಸಭಾ ಅಧ್ಯಕ್ಷ ಮದನ್ ರಾಜ್, ಉಪಾಧ್ಯಕ್ಷೆ ನಾಗರತ್ನ, ಸದಸ್ಯರಾದ ಬಾದಾಮಿ ಮಂಜು,ಮಂಜುನಾಥ್, ನಾಗರಾಜು,ರೂಪ, ಸಿಸ್ಟಮ್ ಸಿದ್ದು,ಗಣೇಶ್, ನಂಜುಂಡಸ್ವಾಮಿ,ಮಾಜಿ ತಾ.ಪಂ.ಉಪಾಧ್ಯಕ್ಷ ಬಿ. ಮರಯ್ಯ,ತಾ.ಪಂ.ಇಓ ಕೃಷ್ಣ,ಗ್ರೇಡ್ -2 ತಹಶೀಲ್ದಾರ್ ರಾಜಣ್ಣ,ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಂ.ವಿ. ಶಿವಶಂಕರಮೂರ್ತಿ,ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ,ಶಿರಸ್ತೆದಾರ್ ಜೆ.ಕೆ.ಪ್ರಭುರಾಜ್, ಕರೋಹಟ್ಟಿ ಪ್ರಭುಸ್ವಾಮಿ, ಉಪಾನ್ಯಾಸಕ ಕುಮಾರಸ್ವಾಮಿ,ವಕೀಲ ಜ್ಞಾನೇಂದ್ರ ,ಸಿಂಗಾಪುರ ಶ್ರೀನಿವಾಸ್,ತಾಲೂಕು ಕಸಾಪ ಮಾಜಿ ಅಧ್ಯಕ್ಷ ಷಣ್ಮುಖಸ್ವಾಮಿ,ಪುರಸಭೆಮುಖ್ಯಾಧಿಕಾರಿ ಬಸವರಾಜು ಇತರರು ಹಾಜರಿದ್ದರು.