ತಾಲೂಕಿನ ಸಮಗ್ರ ಅಭಿವೃದ್ಧಿಗೆ ಎಂಟಿಬಿ ಭರವಸೆ

ಹೊಸಕೋಟೆ, ಆ. ೧- ತಾಲೂಕಿಗೆ ಮತ್ತಷ್ಟು ಅಭಿವೃದ್ದಿ ಮಾಡುವ ದೃಷ್ಠಿಯಿಂದ ವಿಶೇಷ ಅನುದಾನದಲ್ಲಿ ಹಣ ತಂದು ಮೂಲಬೂತ ಸೌಲಭ್ಯಗಳನ್ನು ಮಾಡುವ ಮೂಲಕ ತಾಲ್ಲೂಕನ್ನೇ ಮಾದರಿ ತಾಲ್ಲೂಕಾಗಿ ಮಾಡುತ್ತೇನೆ ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.
ತಾಲೂಕಿನ ಖಾಜಿಹೊಸಹಳ್ಳಿ ಗ್ರಾಪಂ ವ್ಯಾಪ್ತಿಯ ಕಾಮರಸನಹಳ್ಳಿ, ಬೊಮ್ಮನಬಂಡೆ, ಪರಮನಹಳ್ಳಿ ಗ್ರಾಮದಲ್ಲಿ ವಿಧಾನ ಪರಿಷತ್ ಸದಸ್ಯರ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಉಪಚುನಾವಣೆಯಲ್ಲಿ ನಾನು ಸೋಲುಂಡರೂ ಸಹ ಕ್ಷೇತ್ರದ ಅಭಿವೃದ್ದಿ ದೃಷ್ಠಿಯಿಂದ ಹಿಂದೆ ಸರಿದಿಲ್ಲ. ಬದಲಾಗಿ ಸರ್ಕಾರದಲ್ಲಿ ನಾನು ಎಂಎಲ್ಸಿಯಾಗಿ ಸಚಿವನಾಗಿ ಅಗತ್ಯ ಅನುದಾನ ತರುವ ಮೂಲಕ ತಾಲೂಕಿನ ಎಲ್ಲಾ ಗ್ರಾಮಗಳ ಅಭಿವೃದ್ದಿಗೆ ದೃಡ ಸಂಕಲ್ಪ ತೊಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಶಾಶ್ವತ ನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಹೊಸಕೋಟೆ ನಗರಕ್ಕೆ ಕಾವೇರಿ ನೀರು, ಮೆಟ್ರೋ ಸಂಪರ್ಕ ಕಲ್ಪಿಸುವ ದೊಡ್ಡ ಜವಾಬ್ದಾರಿ ಹೊತ್ತಿದ್ದೇನೆ. ಅದನ್ನು ಸಾಕಾರ ಮಾಡುವುತ್ತ ನನ್ನ ಚಿತ್ತ ಹರಿಸಿದ್ದೇನೆ ಎಂದರು.
ಗ್ರಾಪಂ ಮಾಜಿ ಸದಸ್ಯ ಕಾಮರಸನಹಳ್ಳಿ ನಾಗರಾಜ್ ಮಾತನಾಡಿ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುವ ಕೆಲಸ ಆಗಬೇಕು.
ಜನರ ತೆರಿಗೆ ಹಣದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಮಾಡುವುದರಿಂದ ಅನುದಾನ ಲೋಪವಾಗದಂತೆ ಎಚ್ಚರ ವಹಿಸಬೇಕು ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಕೆ.ಸತೀಶ್, ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಸಿ.ನಾಗರಾಜ್, ಮುಖಂಡರಾದ ಬೊಮ್ಮನಬಂಡೆ ಮುನೇಗೌಡ, ಗ್ರಾಪಂ ಸದಸ್ಯರಾದ ದಾಸರಹಳ್ಳಿ ಅಜಯ್, ಖಾಜಿ ಹೊಸಹಳ್ಳಿ ನಾರಾಯಣಸ್ವಾಮಿ, ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಬನಹಳ್ಳಿ ರಮೇಶ್, ಮುಖಂಡರಾದ ಲೋಕೇಶ್, ಗೊಟ್ಟಿಪುರ ಶ್ರೀನಿವಾಸ್ ನಾಯಕ್, ಬೋಧನಹೊಸಹಳ್ಳಿ ಸೊಣ್ಣೇಗೌಡ, ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.