ತಾಲೂಕಿನ ಮೈನಿಂಗ್ ಚಟುವಟಿಕೆ ಬಿಂಬಿಸುವ ಚಿತ್ರಗಳಿಂದ ಅನಾವರಣ .

ಸಂಡೂರು :ಏ:17: ( 2ನೇ ಪೋಟೋ ನೋಡಿ)  ವಿಧಾನಸಭಾ ಚುನಾವಣೆ ದಿನದಿನಕ್ಕೂ ರಂಗೇರುತ್ತಿದೆ. ಚುನಾವಣಾ ಆಯೋಗವೂ ಕೂಡಾ ಪ್ರತಿಯೊಬ್ಬ ಮತದಾರ ತನ್ನ ಹಕ್ಕನ್ನು ಚಲಾಯಿಸಬೇಕು ಎಂಬ ಉದ್ದೇಶದಿಂದ ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಅದರ ಭಾಗವಾಗಿ ಸಂಡೂರು ತಾಲೂಕಿನ ಸುಶೀಲಾನಗರದ ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಗಣಿ ಪ್ರದೇಶ ಮಾದರಿ ಮತಗಟ್ಟೆ ನಿರ್ಮಿಸುವುದರ ಮೂಲಕ ಮತದಾನಕ್ಕೆ ಆಕರ್ಷಣೀಯ , ಮೂಲಭೂತ ಸೌಲಭ್ಯ ಹಾಗೂ ಮತದಾನಕ್ಕೆ ಆಹ್ಲಾದಕರ ವಾತಾವರಣ ಒದಗಿಸಲು ಮುಂದಾಗಿದೆ.

@12bc = ಗಣಿ ಪ್ರದೇಶ ಮತಗಟ್ಟೆ ವಿಶೇಷ ಏನು ?
ತಾಲೂಕಿನ ಸುಶೀಲಾನಗರದ ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ನಿರ್ಮಿಸಿರುವ ಗಣಿ ಪ್ರದೇಶ ಮತಗಟ್ಟೆ ಹೆಸರೇ ಸೂಚಿಸುವಂತೆ ಗಣಿ ತಾಲೂಕಿನ ಚಿತ್ತಾರವನ್ನು ಒಳಗೊಂಡಿದೆ. ಸ್ವತಃ ಈ ಗ್ರಾಮವೂ ಕೂಡಾ ಗಣಿಗಳಿಂದ ಸುತ್ತುವರೆದಿದ್ದು ವಾತಾವರಣಕ್ಕೆ ಅನುಗುಣವಾಗಿ ಕಾರ್ಯಾಲಯದ ಹೊರ ಗೋಡೆಗೆ ಮೈನಿಂಗ್ ಪ್ರದೇಶದ ಚಿತ್ರಗಳನ್ನು ಬಿಡಿಸಲಾಗಿದೆ. ಅಲ್ಲದೆ ಸಂಡೂರು ನಾರಿಹಳ್ಳಿ ಜಲಾಶಯದ ಎರಡು ಗುಡ್ಡಗಳ ಮಧ್ಯೆ ನೀರು ಸಾಗುವ ದೃಶ್ಯವನ್ನು ಮನಮೋಹಕವಾಗಿ ಚಿತ್ರಿಸಲಾಗಿದೆ.
ಒಳಗಡೆ ಸಾಗಿದರೆ ಎದುರಿಗೆ ಲಮಾಣಿ ಮಹಿಳೆಯರು ಮತ್ತು ಸ್ಥಳೀಯ ಸಾಂಪ್ರದಾಯಿಕ ಶೈಲಿ ಉಡುಗೆಯ ಚಿತ್ರಗಳು ಸ್ವಾಗತಿಸುತ್ತವೆ. ಮತದಾನ ಮಾಡುವ ಕೊಠಡಿಯಲ್ಲಿ ಸಂಡೂರು ಅರಮನೆ , ಹಂಪಿ ಕಲ್ಲಿನ ತೇರು ಹಾಗೂ ವಿರುಪಾಕ್ಷೇಶ್ವರ ದೇವಸ್ಥಾನ, ಮತ್ತೊಂದೆಡೆ ಕುಮಾರಸ್ವಾಮಿ ದೇವಾಲಯವನ್ನು ಕಾಣಬಹುದು.

@12bc = ಮಕ್ಕಳ ಆಟಕ್ಕೆ ಆಟಿಕೆ ಕೊಠಡಿ :
ಪಂಚಾಯ್ತಿಯ ಅಧ್ಯಕ್ಷರ ಕೊಠಡಿಯನ್ನು ಮಕ್ಕಳ ಆಟಿಕೆ ಕೊಠಡಿಯನ್ನಾಗಿ ನಿರ್ಮಿಸಲಾಗಿದೆ. ವಿವಿಧ ಆಟಿಕೆಗಳು ಮತ್ತು ಮಕ್ಕಳು ಕುಳಿತುಕೊಳ್ಳಲು ಸಣ್ಣ ಕುರ್ಚಿಗಳನ್ನು ಹಾಕುವ ಮೂಲಕ ಮಕ್ಕಳ ಸ್ನೇಹಿ ವಾತಾವರಣ ನಿರ್ಮಾಣವಾಗಿದೆ. ಮತದಾನಕ್ಕೆ ಆಗಮಿಸುವ ತಾಯಂದಿರು ತಮ್ಮ ಮಕ್ಕಳನ್ನು ಈ ಕೊಠಡಿಯೊಳಗೆ ಆಟವಾಡಲು ಬಿಟ್ಟು ಮತದಾನ ಮಾಡಬಹುದು . ಇದಕ್ಕಾಗಿ ಇನ್ನು ಅವಶ್ಯ ಆಟದ ಸಾಮಾನುಗಳನ್ನೂ ಕೂಡಾ ಒದಗಿಸಲಾಗುವುದು ಎನ್ನುತ್ತಾರೆ ಸುಶೀಲಾನಗರ ಗ್ರಾಮ ಪಂಚಾಯ್ತಿ ಪಿಡಿಒ ಸಿದ್ಧಲಿಂಗಯ್ಯ ಸ್ವಾಮಿ.

@12bc = ಇತರೆ ಮೂಲಭೂತ ಸೌಲಭ್ಯಗಳು ಲಭ್ಯ.
ಬೇಸಿಗೆ ಹೆಚ್ಚಾಗಿಇರುವ ಕಾರಣದಿಂದ ಮತದಾನ ಮಾಡಲು ಬಂದವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಎಸಿ ಹಾಕಿಸಿ ಹವಾನಿಯಂತ್ರಿತ ವಾತಾವರಣ ನಿರ್ಮಾಣವಾಗಲಿದೆ. ಮತದಾನದ ಕೊಠಡಿಯೊಳಗೆ ಮ್ಯಾಟ್ ಕೂಡಾ ಹಾಕಿಸಲಾಗಿದೆ. ಜೊತೆಗೆ ಅಂಗವಿಕಲರಿಗೂ ಅನುಕೂಲವಾಗಲಿ ಎಂಬ ಉದ್ದೇಶದಿಂದ ಯಾರ್ಂಪ್ ಕೂಡಾ ನಿರ್ಮಿಸಲಾಗಿದೆ. ಮತದಾನದ ದಿನದಂದು ಮತದಾರರು ಕುಳಿತುಕೊಳ್ಳಲು 100 ಕುರ್ಚಿಗಳು, ಶ್ಯಾಮಿಯಾನ , ಓದಲು ದಿನ ಪತ್ರಿಕೆಗಳು ಸೇರಿದಂತೆ ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಮತದಾರರನ್ನು ಮತಗಟ್ಟೆಗಳ ಕಡೆ ಸೆಳೆಯಲು ಪ್ರಯತ್ನಗಳು ನಡೆದಿವೆ.

 ಇತರೆ ವಿಶೇಷ ಮತ ಗಟ್ಟೆಗಳು ಯಾವ್ಯಾವು :

ಸಂಡೂರು ವಿಧಾನ ಸಭಾ ಕ್ಷೇತ್ರದಲ್ಲಿ ಸುಶೀಲಾನಗರ ಹೊರತು ಪಡಿಸಿ ಇತರೆಡೆಯೂ ವಿಶೇಷ ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು ಅವು ಸ್ವಲ್ಪ ಇಲ್ಲಿಗಿಂತ ಭಿನ್ನವಾಗಿವೆ . ತಾಲೂಕಿನ ನಾರಾಯಣಪುರ ಪ್ರಾಥಮಿಕಶಾಲೆ , ಸಂಡೂರಿನ ಕೆಇಬಿ ಬಳಿಯ ಉರ್ದು ಶಾಲೆ,ವಡ್ಡು ಗ್ರಾಮದ ಪ್ರಾಥಮಿಕ ಶಾಲೆ ,ಜಿಂದಾಲ್ ವಿದ್ಯಾನಗರದ ವಿಶಾಲ ಬಾಲವಾಡಿ,ತೋರಣಗಲ್ಲು ಪಶ್ಚಿಮ ಭಾಗದ ಪ್ರಾಥಮಿಕಶಾಲೆಗಳಲ್ಲಿ ಸಖಿ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ.ಸಂಡೂರು ತಾಲೂಕು ಪಂಚಾಯ್ತಿ ಕಾರ್ಯಾಲಯದಲ್ಲಿ ವಿಶೇಷ ಚೇತನರ ಮತಗಟ್ಟೆ,ಸಂಡೂರು ಪಟ್ಟಣದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರ ಕಚೇರಿಯಲ್ಲಿ ಯುವ ಮತದಾರರ ಮತಗಟ್ಟೆ , ಎನ್ ಎಂಡಿಸಿ ಕೇಂದ್ರೀಯ ವಿದ್ಯಾಲಯದಲ್ಲಿ ಪರಿಸರ ಸ್ನೇಹಿ ಮತಗಟ್ಟೆ,ವೆಂಕಟಗಿರಿಯಲ್ಲಿ ಸಾಂಪ್ರದಾಯಿಕ ಮತಗಟ್ಟೆ,ಉತ್ತರ ಮಲೈ ಗ್ರಾಮದಲ್ಲಿ ನೀರು ನೆರಳು ಮತಗಟ್ಟೆ ಸೇರಿದಂತೆ ಕ್ಷೇತ್ರದಾಧ್ಯಂತ ಒಟ್ಟು 11 ವಿಶೇಷ ಮತಗಟ್ಟೆಗಳನ್ನು ಈ ಬಾರಿ ನಿರ್ಮಿಸಲಾಗಿದೆ.

ಹೇಳಿಕೆ 1 : ಸಂಡೂರು ವಿಧಾನ ಸಭಾ ಕ್ಷೇತ್ರವು ಅನೇಕ ಗಣಿಗಳನ್ನು ಒಳಗೊಂಡಿರುವುದರಿಂದ ಮತದಾರರನ್ನು ಅದೇ ಮನಸ್ಥಿತಿಯಲ್ಲಿ ಸೆಳೆಯಲು ಗಣಿ ಚಿತ್ರಗಳು ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಸುಶೀಲಾನಗರ ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಜ ಗಣಿ ಪ್ರದೇಶ ಮಾದರಿ ಮತಗಟ್ಟೆಯನ್ನು ನಿರ್ಮಿಸಲಾಗುತ್ತಿದೆ.ಕಳೆದ ಬಾರಿ 74.4% ಮತದಾನವಾಗಿತ್ತು ಈ ಬಾರಿ ಶೇ. 85 ಮತದಾನವಾಗಬೇಕೆಂಬ ಗುರಿಯೊಂದಿಗೆ ಒಟ್ಟು 11 ವಿಶೇಷ ಮತಗಟ್ಟೆಗಳನ್ನು ನಿರ್ಮಿಸಲಾಗುತ್ತಿದೆ.

ಶರಣಬಸವರಾಜ್ ,ಚುನಾವಣಾಧಿಕಾರಿ ಸಂಡೂರು ವಿಧಾನಸಭಾ ಕ್ಷೇತ್ರ.