ತಾಲೂಕಿನ ಕಲ್ಲಹಳ್ಳಿಯಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಭೆ

ಹೊಸಪೇಟೆ ಮೇ1: ಕೊರೊನಾ ನಿಯಂತ್ರಣ ಮುಂಜಾಗ್ರತ ಕ್ರಮವಾಗಿ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಕೋವಿಡ್-19ನ ಟಾಸ್ಕ್ ಫೋರ್ಸ್ ಸಮಿತಿ ಸಭೆ ಶುಕ್ರವಾರ ನಡೆಯಿತು.
ಸಭೆಯಲ್ಲಿ ಸಮಿತಿಯ ನೋಡಲ್ ಅಧಿಕಾರಿ ಉಮೇಶ್ ಅಧ್ಯಕ್ಷತೆವಹಿಸಿ ಮಾತನಾಡಿ, ವಲಸೆ ಬಂದ ಕಾರ್ಮಿಕರ ಬಗ್ಗೆ ನಿಗಾವಹಿಸಬೇಕು. ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಂಡಿರಬೇಕು. ವಲಸೆ ಬಂದ ಕಾರ್ಮಿಕರಲ್ಲಿ ಕೋವಿಡ್-19ನ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಆಸ್ವತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆಯಬೇಕು ಎಂದು ಸಲಹೆ ನೀಡಿದರು.
ಗ್ರಾಮಗಳಲ್ಲಿ ವಲಸೆ ಬಂದಂತಹ ಕಾರ್ಮಿಕರು ಸ್ವಲ್ಪ ದಿನದ ಮಟ್ಟಿಗೆ ಹೊರಗಡೆ ತಿರುಗಾಡದಂತೆ ಹೋಂ ಐಸೋಲೇಶನ್ ನಲ್ಲಿರಬೇಕು ಇದರಿಂದ ಅವರಲ್ಲಿ ಕೋವಿಡ್ ಸೋಂಕು ಇದ್ದರೆ ಅವರಿಂದ ಮತ್ತೊಬ್ಬರಿಗೆ ಸೋಂಕು ಹರಡದಂತೆ ತಡಗಟ್ಟಬಹುದು ಎಂದು ಹೇಳಿದರು.
ಪಿಡಿಓ ಉಮಾ ಕಾಳೆ, ಅಧ್ಯಕ್ಷೆ ಶಂಕುತಲಾ ಬಾಯಿ ಮತ್ತು ಟಾಸ್ಟ್ ಫೋರ್ಸ್ ಸದಸ್ಯರಾದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸಭೆಯಲ್ಲಿ ಪಾಲ್ಗೊಂಡಿದ್ದರು.