ತಾಲೂಕಿನೆಲ್ಲೆಡೆ ಅಕ್ರಮ ಮದ್ಯದ ದಂಧೆ

ತಿ.ನರಸೀಪುರ: ಜ.17:- ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಅಕ್ರಮ ಮದ್ಯದ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ.ಗ್ರಾಮೀಣ ಭಾಗದ ಕಿರಾಣಿ ಅಂಗಡಿಗಳು,ಪೆಟ್ಟಿಗೆ ಅಂಗಡಿ ಮತ್ತು ಸಣ್ಣ ಹೋಟೆಲ್ ಗಳಲ್ಲಿ ದಿನದ 24 ಘಂಟೆಗಳಲ್ಲೂ ಮದ್ಯ ಲಭ್ಯವಿದ್ದು,ಗ್ರಾಮೀಣ ಪ್ರದೇಶದ ಜನರು, ವಿದ್ಯಾರ್ಥಿಗಳು ಮತ್ತು ಅಪ್ರಾಪ್ತರು ದಿನವಿಡೀ ಅಕ್ರಮ ಮದ್ಯದ ಅಮಲಿನಲ್ಲಿ ತೇಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮೀಣ ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟ ದೊಡ್ಡ ದಂಧೆಯಾಗಿ ಪರಿಣಮಿಸಿದೆ.ಸಣ್ಣ ಕಿರಾಣಿ ಅಂಗಡಿಗಳಲ್ಲಿ ಚಿಲ್ಲರೆ ವ್ಯಾಪಾರಕ್ಕಿಂತ ಮದ್ಯದ ಭರಾಟೆಯೇ ಹೆಚ್ಚು !!ಇಲ್ಲಿ ದಿನದ 24 ಗಂಟೆಗಳಲ್ಲೂ ಮದ್ಯ ಲಭ್ಯವಿದ್ದು,ಮಧ್ಯ ರಾತ್ರಿಯಲ್ಲೂ ಕುಡಿಯಲು ಮದ್ಯ ಸಿಗುತ್ತಿರುವುದು ಅಬಕಾರಿ ಇಲಾಖಾ ವೈಫಲ್ಯಕ್ಕೆ ಸಾಕ್ಷಿ.
ಚಿಲ್ಲರೆ ಅಂಗಡಿಗಳಲ್ಲಿ ದುಪ್ಪಟ್ಟು ಬೆಲೆಗೆ ಅಕ್ರಮ ಮದ್ಯ ಮಾರಾಟವಾಗುತ್ತಿದ್ದು, ಗ್ರಾಮೀಣ ಭಾಗದ ಯುವಕರು, ಪುರುಷರು ಮತ್ತು ಅಪ್ರಾಪ್ತರು ಮದ್ಯ ವ್ಯಸನಿಗಳಾಗಿ ಕೊಲೆ, ಸುಲಿಗೆ ಮತ್ತು ಇನ್ನಿತರ ಸಮಾಜ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಸ್ಥಳೀಯ ಕಿರಾಣಿ ಅಂಗಡಿಗಲ್ಲಿ ಮದ್ಯ ಲಭ್ಯ ಇರುವುದರಿಂದ ಮುಂಜಾನೆಯೇ ವಿದ್ಯಾರ್ಥಿಗಳು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದು, ಶಾಲಾ -ಕಾಲೇಜುಗಳಿಗೆ ಗೈರಾಗಿ ಅವರ ವಿದ್ಯಾಭ್ಯಾಸ ಕುಂಠಿತವಾಗುತ್ತಿದೆ. ತೋಟಗಳು, ಸೋಪಾನಕಟ್ಟೆ, ರಸ್ತೆಬದಿಗಳಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರು ಬೆಳಗಿನ ಅವಧಿಯಲ್ಲಿ ಗುಂಪುಗುಂಪಾಗಿ ಕುಳಿತು ಮದ್ಯಪಾನ ಮಾಡುವ ದೃಶ್ಯಗಳು ದಿನಂಪ್ರತಿ ಕಣ್ಣಿಗೆ ರಾಚುತ್ತದೆ.
ತಾಲೂಕಿನ ಬಹುತೇಕ ಮಾಂಸಾಹಾರಿ ಹೋಟೆಲ್ ಗಳಲ್ಲಿ ಮದ್ಯಮಾರಾಟ ಎಗ್ಗಿಲ್ಲದೆ ಸಾಗುತ್ತಿದೆ.ಮಾಂಸಾಹಾರಿ ಹೋಟೆಲ್ ಗಳಿಗೆ ಮದ್ಯ ಮಾರಾಟದ ಪರವಾನಗಿ ಇಲ್ಲದಿದ್ದರೂ ಅಕ್ರಮ ಮದ್ಯ ಮಾರಾಟ ಬಲು ಜೋರಾಗಿದೆ.ಮಾಂಸಾಹಾರಿ ಹೋಟೆಲ್‍ಗಳು ಹೆಚ್ಚು ಮಾಂಸಾಹಾರ ಮಾರಾಟದ ಉದ್ದೇಶದಿಂದ ಅಕ್ರಮ ಮದ್ಯ ಮಾರಾಟಕ್ಕೆ ಕೈ ಹಾಕಿವೆ.
ಅಕ್ರಮ ಮದ್ಯ ಮಾರಾಟದ ಬಗ್ಗೆ ಅಬಕಾರಿ ಇಲಾಖೆಗೆ ಮಾಹಿತಿಯಿದ್ದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ.ಇಲಾಖೆಯ ದ್ವಂದ್ವ ನಿಲುವು ಅಕ್ರಮ ಮದ್ಯ ಮಾರಾಟಗಾರರ ಮೇಲೆ ಮೃಧು ಧೋರಣೆ ತಳೆಯುವಂತೆ ಮಾಡಿದೆ.ಬಾರ್ ನ ಸನ್ನದ್ದುದಾರರಿಗೆ ಅಬಕಾರಿ ಇಲಾಖೆಯು ಮದ್ಯ ಮಾರಾಟದ ಗುರಿಯನ್ನು ನಿಗದಿತ ಮಾಡಿದ್ದು,ಇದು ಅಕ್ರಮ ಮದ್ಯ ಮಾರಾಟಕ್ಕೆ ಮೂಲವಾಗಿದೆ.ಹಾಗಾಗಿ ಬಾರ್ ಮಾಲೀಕರು ತಮ್ಮ ಮದ್ಯ ಮಾರಾಟದ ಗುರಿ ಸಾಧನೆಗೋಸ್ಕರ ವಾಮಮಾರ್ಗ ಮೂಲಕ ಕಿರಾಣಿ ಅಂಗಡಿಗಳು,ಸಣ್ಣ ಹೋಟೆಲ್ ಗಳು,ಮಾಂಸಹಾರಿ ಹೋಟೆಲ್ ಗಳಿಗೆ ಸ್ವತಃ ಬಾರ್ ಮಾಲೀಕರೇ ಮದ್ಯ ಸರಬರಾಜು ಮಾಡುತ್ತಿರುವುದರಿಂದ ತಾಲೂಕಿನ ಎಲ್ಲ ಗ್ರಾಮಗಳಲ್ಲೂ ಅಕ್ರಮ ಮದ್ಯ ಸುಲಭವಾಗಿ ದೊರಕುತ್ತಿದೆ.
ರೈತ ಸಂಘಟನೆಗಳು, ದಲಿತ ಸಂಘಟನೆಗಳು ತಾಲೂಕು ಮಟ್ಟದ ಸಭೆಗಳಲ್ಲಿ ಶಾಸಕರು ಮತ್ತು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಅಕ್ರಮ ಮದ್ಯ ಮಾರಾಟದ ತಡೆಗೆ ಒತ್ತಾಯ ಮಾಡಿವೆ. ಅಲ್ಲದೆ ಅಕ್ರಮ ಮದ್ಯ ಮಾರಾಟದಿಂದ ಗ್ರಾಮೀಣ ಭಾಗಗಳಲ್ಲಿ ಉದ್ಭವಿಸಿರುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿದ್ದರೂ ಇದುವರೆವಿಗೂ ಯಾವುದೇ ಕ್ರಮ ಜರುಗಿಸಿಲ್ಲ.ಅಕ್ರಮ ಮದ್ಯ ಮಾರಾಟದಿಂದ ತಾಲೂಕಿನ ಬಹುತೇಕ ಯುವಕರು,ವಯಸ್ಕರು ಮತ್ತು ವಿದ್ಯಾರ್ಥಿಗಳ ಜೀವನ ಸಂಕಷ್ಟಕ್ಕೆ ಸಿಲುಕಿದೆ.
ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟದ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಅಬಕಾರಿ ಮತ್ತು ಪೆÇಲೀಸ್ ಇಲಾಖೆಗಳು ಕಣ್ಣುಮುಚ್ಚಿ ಕುಳಿತಿವೆ. ಅಕ್ರಮ ಮದ್ಯದ ಮಾರಾಟ ಕೇವಲ ಗ್ರಾಮೀಣ ಪ್ರದೇಶಕ್ಕೆ ಸೀಮಿತವಲ್ಲ. ಇದರ ಕಬಂಧಬಾಹು ಪಟ್ಟಣ, ನಗರ ಪ್ರದೇಶ, ರಾಜ್ಯ, ದೇಶವನ್ನು ವ್ಯಾಪಿಸಿದೆ.
ಮದ್ಯ ಮಾರಾಟದಿಂದ ರಾಜ್ಯದ ಬೊಕ್ಕಸಕ್ಕೆ ಅತೀವ ರಾಜಸ್ವ ಬರುವುದಂತು ನಿಜ.ಆದರೆ,ಮದ್ಯ ವ್ಯಸನದಿಂದ ಉಂಟಾಗುವ ಅನಾರೋಗ್ಯ, ವಿದ್ಯಾಭ್ಯಾಸ ಕುಂಠಿತ, ಸಾಂಸಾರಿಕ ಕಲಹ, ಕೊಲೆ ,ಸುಲಿಗೆ ಮತ್ತು ಸಾಂಸಾರಿಕ ವ್ಯಾಜ್ಯಗಳಿಗೆ ಪರಿಹಾರ ನೀಡುವವವರು ಯಾರು? ಅಕ್ರಮ ಮದ್ಯ ಮಾರಾಟದ ಅಕ್ರಮವನ್ನು ನಿಗ್ರಹಿಸುವವರು ಯಾರು ಇಲ್ಲವೇ?