ತಾಲೂಕಿನಾದ್ಯಂತ ಸೆಕ್ಷನ್-4 ಗೆ ಸಂಬಂಧಿಸಿದ ನಾಮಫಲಕವನ್ನು ಅಳವಡಿಸಲು ಸೂಚನೆ

ವಿಜಯಪುರ ಡಿ.20 : ಜಿಲ್ಲೆಯ ಎಲ್ಲ ಇಲಾಖೆಯ ಮುಖ್ಯಸ್ಥರು ಸೆಕ್ಷನ್ -4 ಗೆ ಸಂಬಂಧಿಸಿದ ನಾಮ ಫಲಕವನ್ನು ತಮ್ಮ ತಮ್ಮ ಕಾರ್ಯಾಲಯದಲ್ಲಿ ಕಡ್ಡಾಯವಾಗಿ ಅಳವಡಿಸುವದರ ಜೊತೆಗೆ ತಮ್ಮ ಅಧೀನದಲ್ಲಿ ಬರುವ ತಾಲೂಕಿನಾದ್ಯಂತ ಎಲ್ಲ ಕೇಂದ್ರ, ಕಚೇರಿಗಳಲ್ಲಿ ಈ ನಾಮಫಲಕವನ್ನು ಅಳವಡಿಸಿ ತಂಬಾಕು ಮುಕ್ತ ವಲಯವನ್ನಾಗಿ ಮಾಡಬೇಕು ಎಂದು ವಿಜಯಪುರ, ತಹಶೀಲ್ದಾರ ಶ್ರೀಮತಿ ಮೋಹನಕುಮಾರಿ ಅವರು ಸೂಚಿಸಿದರು.

ವಿಜಯಪುರ ತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ (ಡಿ.17) ಗುರುವಾರದಂದು ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ತಾಲೂಕಿನ ಎಲ್ಲ ಶಿಕ್ಷಣ ಸಂಸ್ಥೆಗಳು ಸೆಕ್ಷನ್ -4 ಸೆಕ್ಷನ್ -6 (ಬಿ) ಗೆ ಸಂಬಂಧಿಸಿದ ನಾಮಫಲಕಗಳನ್ನು ಅಳವಡಿಸಿ ಯಾವುದೇ ಶಿಕ್ಷಣ ಸಂಸ್ಥೆಯ 100 ಗಜ ಅಂತರದೊಳಗೆ ತಂಬಾಕು ಉತ್ಪನ್ನಗಳ ಮಾರಾಟವಾಗದಂತೆ ಕ್ರಮವಹಿಸಿ ಸರ್ಕಾರದ ಮಾರ್ಗಸೂಚಿಯಂತೆ ತಂಬಾಕು ಮುಕ್ತ ಶಾಲೆಯನ್ನಾಗಿ ಘೋಸಿಸಲು ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಪುರಸಭೆ, ಪಟ್ಟಣ ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳು ಉದ್ಯಮಿ ಪರವಾನಗಿ ನೀಡುವಾಗ ಹಾಗೂ ಪರವಾನಿಗಿ ನವೀಕರಣ ಸಮಯದಲ್ಲಿ ಎಲ್ಲ ಪಾನ್‍ಶಾಪ್‍ಗಳು ,ತಂಬಾಕು ಮಾರಾಟ ಮಾಡುವ ಅಂಗಡಿಗಳು ಸೆಕ್ಷನ್ -4 ಮತ್ತು ಸೆಕ್ಷನ್ 6 (ಎ) ಸಂಬಂಧಿಸಿದ ನಾಮಫಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು.

ಅದರಂತೆ ಹೊಟೇಲ್, ರೆಸ್ಟೊರೆಂಟ್, ಬೇಕರಿ ಮತ್ತು ಲಾಡ್ಜ್‍ಗಳಲ್ಲಿ ಸೆಕ್ಷನ್ -4 ಗೆ ಸಂಬಂಧಿಸಿದ ನಾಮಫಲಕವನ್ನು ಅಳವಡಿಸುವಂತೆ ಕ್ರಮ ಕೈಗೊಂಡು, ಯಾರೂ ಯಾವುದೇ ರೀತಿಯ ತಂಬಾಕು ಸಂಬಂಧಿತ ಜಾಹೀರಾತುಗಳನ್ನು ಅಳವಡಿಸದಂತೆ ನಿಗಾವಹಿಸಿ ತನಿಖಾ ತಂಡಕ್ಕೆ ದಾಳಿಯಲ್ಲಿ ಸೂಕ್ತ ಸಹಕಾರ ನೀಡಬೇಕು ಎಂದು ಅವರು ಸಂಬಂಧಿಸಿದ ಪುರಸಭೆ ಮುಖ್ಯಸ್ಥರು, ಪಟ್ಟಣ ಪಂಚಾಯತ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನಲ್ಲಿ ತನಿಖಾದಳದ ಸದಸ್ಯರು ಜಂಟಿಯಾಗಿ ಕಡ್ಡಾಯವಾಗಿ ತಿಂಗಳಿನಲ್ಲಿ ಕನಿಷ್ಠ 2 ದಾಳಿ ಕೈಗೊಂಡು ಸೆಕ್ಷನ್ 5 ಹಾಗೂ ಸೆಕ್ಷನ್ 7 ರಡಿ ಪ್ರಕರಣ ದಾಖಲಿಸಬೇಕು ಹಾಗೂ ಪ್ರತಿ 3 ತಿಂಗಳಿಗೊಮ್ಮೆ ಈ ಸಭೆಯನ್ನು ಆಯೋಜಿಸಬೇಕು.

ತನಿಖಾ ತಂಡದ ಇಲಾಖೆ ಮುಖ್ಯಸ್ಥರು, ಅಧೀನ ಸಿಬ್ಬಂದಿಗಳು ತಾವು ಕಾರ್ಯ ನಿರ್ವಹಿಸುವ ಸ್ಥಳಗಳಲ್ಲಿ ಕೊಟ್ಪಾ 2003 ರ ನಿಯಮಗಳ ಬಗ್ಗೆ ಅರಿವು ಮೂಡಿಸಿ ಅಲ್ಲಿ ತಂಡದೊಂದಿಗೆ ನಿಯಮಿತವಾಗಿ ದಾಳಿ ಕೈಗೊಳ್ಳಬೇಕು ಮತ್ತು ಜಿಲ್ಲಾ ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಬೇಕು ಎಂದು ಅವರು ತಾಲೂಕು ಆರೋಗ್ಯ ಅಧಿಕಾರಿಗಳು ಮತ್ತು ತಾಲೂಕಾ ಮಟ್ಟದ ತಂಬಾಕು ನಿಯಂತ್ರಣ ತನಿಖಾದಳದ ಸದಸ್ಯರುಗಳಿಗೆ ಸೂಚಿಸಿದರು.

ತಾಲ್ಲೂಕಿನಾದ್ಯಂತ ಅಬಕಾರಿ ಇಲಾಖೆಯವರು ಎಲ್ಲ ಬಾರ್‍ಗಳಲ್ಲಿ ಕೋಟ್ಪಾ ಕಾಯ್ದೆಯ ಸೆಕ್ಷನ್ 4 ರ ನಾಮಫಲಕ ಅಳವಡಿಸುವಂತೆ ಹಾಗೂ ಕಾಯ್ದೆಯ ಇತರೆ ನಿಯಮಗಳನ್ನು ಉಲ್ಲಂಘನೆ ಆಗದಂತೆ ಕ್ರಮಕೈಗೊಂಡು ತನಿಖಾದಳದ ಜೊತೆ ದಾಳಿ ಮಾಡಬೇಕು ಎಂದು ಅವರು ಸೂಚಿಸಿದರು.

ಸಭೆಯಲ್ಲಿ ತಾಲೂಕ ಆರೋಗ್ಯ ಶಿಕ್ಷಣ ಅಧಿಕಾರಿಗಳಾದ ಎನ್.ಆರ್ ಬಾಗವಾನ, ಡಾ.ಪ್ರಕಾಶ ಚವ್ಹಾಣ, ತಾಲೂಕ ಆರೋಗ್ಯಾಧಿಕಾರಿ ಡಾ.ಕವಿತಾ, ಮಹಾನಗರ ಪಾಲಿಕೆ ಇಂಜಿನೀಯರ್ ಸೈಯದ್ ಜಕ್ರಿಯಾ ಸುರಕಿ, ವೈದ್ಯಾಧಿಕಾರಿ ಪ್ರಕಾಶ ಗೊಳಪ್ಪಗೋಳ, ಶ್ರೀ ಸುರೇಶ ಹೊಸಮನಿ, ಶಿಶು ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ನಿರ್ಮಲಾ ಸುರಪೂರ, ಗೀತಾ ಗುತ್ತರಗಿಮಠ, ಶಿಕ್ಷಣ ಇಲಾಖೆಯ ಸಿ.ಎಸ್ ಹಿರೇಮಠ, ಬಿ.ಎಸ್.ಕಾಂಬಳೆ, ವ್ಹಿ.ಎಮ್ ಪೋದ್ದಾರ, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.