ತಾಲೂಕಿನಾದ್ಯಂತ ಸಕ್ರಿಯ ಕ್ಷಯ ಪತ್ತೆ ಆಂದೋಲನ

ಕೆ.ಆರ್.ಪೇಟೆ.ಜು.19: ಸಂಭವಿಯ ಸಕ್ರಿಯ ಕ್ಷಯ ಪತ್ತೆ ಆಂದೋಲನಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್ ಚಾಲನೆ ನೀಡಿದರು. ದಿನಾಂಕ 18.07.2022 ರಿಂದ 15.8.2022ರವರೆಗೆ ತಾಲೂಕಿನಾದ್ಯಂತ ಸಕ್ರಿಯ ಕ್ಷಯ ಪತ್ತೆ ಆಂದೋಲನ ಹಮ್ಮಿಕೊಳ್ಳಲಾಗಿದ್ದು ಆರೋಗ್ಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಸಂಭವಿಯ ರೋಗಿಗಳನ್ನು ಪತ್ತೆಹಚ್ಚುವುದು, ಕಫ ಪರೀಕ್ಷೆ ಹಾಗೂ ಕ್ಷ-ಕಿರಣ ಪರೀಕ್ಷೆಗೆ ನಿರ್ದೇಶನ ಮಾಡುವ ಕಾರ್ಯ ಚಟುವಟಿಕೆ ನಡೆಯಲಿದೆ ಎಂದು ತಿಳಿಸಿದರು.
ಕೇವಲ ರೋಗಲಕ್ಷಣಗಳು ಉಳ್ಳವರು ಮಾತ್ರವಲ್ಲದೆ ಸಹವರ್ತಿ ರೋಗಿಗಳಾದ ರಕ್ತದೊತ್ತಡ, ಸಕ್ಕರೆ ಕಾಯಿಲೆ,ಕ್ಯಾನ್ಸರ್ ರೋಗಿಗಳು, ಲಕ್ವಾ, ಹೃದಯ ಸಂಬಂಧಿ ಕಾಯಿಲೆಗಳು, ಅಸ್ತಮಾ,ಸಿ.ಒ.ಪಿ.ಡಿ ರೋಗಿಗಳು, ಧೂಮಪಾನಿಗಳು ಹಾಗೂ ಮಧ್ಯವೆಸನಿಗಳನ್ನು ಕೂಡ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್ ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶಿವಕುಮಾರ್ ಮಾತನಾಡಿ ಕ್ಷಯ ರೋಗವು ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು ಕಫದಲ್ಲಿ ಕ್ಷಯ ರೋಗದ ಕ್ರಿಮಿ ಇರುವ ಒಬ್ಬ ಕ್ಷಯ ರೋಗಿಯು ಚಿಕಿತ್ಸೆಯನ್ನು ಪಡೆಯದಿದ್ದರೆ ಒಂದು ವರ್ಷಕ್ಕೆ 15 ರಿಂದ 20 ಜನಕ್ಕೆ ರೋಗವನ್ನು ಹರಡಿಸುತ್ತಾನೆ.
ಈ ಕಾಯಿಲೆಯ ಮುಖ್ಯ ಲಕ್ಷಣಗಳೆಂದರೆ ಕೆಮ್ಮು, ಸಂಜೆ ವೇಳೆಯಲ್ಲಿ ಜ್ವರ,ಬೆವರುವುದು,ಹಸಿವಾಗದೆ ಇರುವುದು, ತೂಕ ಕಡಿಮೆಯಾಗುವುದು. ಎದೆ ನೋವು ರಕ್ತ ಮಿಶ್ರಿತ ಕಫ ಇತ್ಯಾದಿಗಳಾಗಿರುತ್ತವೆ ಇಂತವರನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ತಿಳಿಸಿದರು.
ಪರೀಕ್ಷೆಯಲ್ಲಿ ಕಾಯಿಲೆ ದೃಢಪಟ್ಟವರಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರ್.ಬಿ.ಎಸ್.ಕೆ ತಂಡ, ಆರೋಗ್ಯ ನಿರೀಕ್ಷಣಾಧಿಕಾರಿ ಸತೀಶ್, ನಾಗೇಶ್, ರೇಖಾ ಸೇರಿದಂತೆ ಮತ್ತಿತರರು ಹಾಜರಿದ್ದರು.