ತಾಲೂಕಿನಲ್ಲಿ ಹೆಚ್ಚಿದ ಕರೋನಾ ಸೋಂಕು

ಸಂಜೆವಾಣಿ ವಾರ್ಥೆ
ಸಿರುಗುಪ್ಪ ಜ 14 : ತಾಲೂಕಿನಲ್ಲಿ 30 ಜನರಿಗೆ ಕರೊನಾ ಸೋಂಕು ದೃಢವಾಗಿದ್ದು,  23ಜನ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಾಲೂಕಿನ 7ಜನ ವಿವಿಧ ರಾಜ್ಯಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಕರೋನಾ ತಾಲೂಕು ನೋಡಲ್ ಅಧಿಕಾರಿ ಡಾ.ವಿದ್ಯಾಶ್ರೀ ತಿಳಿಸಿದ್ದಾರೆ.
     ನಗರದ ತಾಲೂಕು ಕಚೇರಿಯಲ್ಲಿ ಕೋವಿಡ್ ಮುಂಜಾಗ್ರತೆ ಕುರಿತು ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ವೈದ್ಯ, ಲ್ಯಾಬ್‍ಟೆಕ್ನಿಷಿಯನ್, ನರ್ಸ್, ಗರ್ಭಿಣಿ, ಸಾರ್ವಜನಿಕರು ಹಾಗೂ ವಿವಿಧ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಕರೋನಾ ಸೋಂಕು ತಗುಲಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಎಲ್ಲರೂ ಆರೋಗ್ಯವಾಗಿದ್ದು, ಯಾವುದೇ ಗಂಭೀರ ಸಮಸ್ಯೆ ಇಲ್ಲ. ನಮ್ಮಲ್ಲಿ ಕೋವಿಡ್‍ಗೆ ಸಂಬಂಧಿಸಿದಂತೆ ವೆಂಟಿಲೇಟರ್, ಔಷಧ, ಆಕ್ಸಿಜನ್, ಬೆಡ್ ಹಾಗೂ ಸಿಸಿಸಿ ಸೆಂಟರ್ ತೆರೆಯಲಾಗಿದ್ದು, ಕರೋನಾ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಸಿದ್ದರಿದ್ದೇವೆ ಎಂದು ಹೇಳಿದರು.
    ತಹಸೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ ಮಾತನಾಡಿ, ಕರೋನಾ ಮೂರನೇ ಅಲೆಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದ್ದರೂ ಸಾರ್ವಜನಿಕರು ಮುನ್ನೆಚ್ಚರಿಕೆಯಿಂದ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಮುಂದೆ ಆಗಬಹುದಾದ ಅನಾಹುತವನ್ನು ತಡೆಯಬೇಕು. ಸಣ್ಣ ಕಾಯಿಲೆ ಕಾಣಿಸಿಕೊಂಡರೂ ನಿರ್ಲಕ್ಷೆಮಾಡದೆ ವ್ಯದ್ಯರನ್ನು ಸಂಪರ್ಕಿಸಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ನಂತರ ಸೂಕ್ತ ಮಾರ್ಗದರ್ಶನ ಪಡೆದು ಚಿಕಿತ್ಸೆ ಪಡೆಯಬೇಕೆಂದು ಹೇಳಿದರು.
   ಫಾರ್ಮಸಿಸ್ಟ್ ನರೇಶ ಇದ್ದರು.