ತಾಲೂಕಿಗೆ ನೀರಾವರಿ ಸೌಲಭ್ಯ ಒದಗಿಸದಿದ್ದರೇ ಹೋರಾಟ – ಎಚ್ಚರಿಕೆ

ರಾಯಚೂರು.ನ.೩೦- ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ ಸುಮಾರು ಹೆಕ್ಟರ್ ಹತ್ತಿ, ಭತ್ತ ಬೆಳೆ ನಾಶವಾಗಿತ್ತು. ಬೆಳೆ ನಾಶದ ಬಗ್ಗೆ ಸರ್ಕಾರ ಸಮೀಕ್ಷೆ ಮಾಡಿ, ಕೂಡಲೇ, ರೈತರಿಗೆ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೂತನ ಜಿಲ್ಲಾಧ್ಯಕ್ಷರಾದ ನರಸಿಂಹಲು ನಾಯಕ ಕಮಲಾಪೂರು ಅವರು ಒತ್ತಾಯಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿದ ಮಳೆಗೆ ಸಾಕಷ್ಟು ಬೆಳೆಗಳು ನಷ್ಟವಾಗಿದ್ದು, ಸರ್ಕಾರ ಬೆಳೆ ಸಮೀಕ್ಷೆ ನಡೆಸಿ, ರೈತರಿಗೆ ಪರಿಹಾರ ನೀಡುವ ಕೆಲಸ ಕೂಡಲೇ ಮಾಡಬೇಕು. ರೈತರಿಗೆ ಎಲ್ಲೆ ಸಮಸ್ಯೆಯಾದರೂ, ನ್ಯಾಯಯುತವಾಗಿ ನಮ್ಮ ಸಂಘಟನೆ ಪರಿಹರಿಸುವ ನಿಟ್ಟಿನಲ್ಲಿ ಹೋರಾಟ ಹಮ್ಮಿಕೊಳ್ಳಲಾಗುತ್ತದೆ. ರೈತರಿಗೆ ಯಾವುದೇ ಸಮಸ್ಯೆ ಬಂದರೇ ನಮ್ಮ ಗಮನಕ್ಕೆ ತರಬೇಕು. ರಾಯಚೂರು ತಾಲೂಕಿನಲ್ಲಿ ನೀರಾವರಿ ಸೌಲಭ್ಯವಿಲ್ಲ. ಆದ್ದರಿಂದ ನೀರಾವರಿ ಸೌಲಭ್ಯಕ್ಕಾಗಿ ದೊಡ್ಡ ಪ್ರಮಾಣದ ಹೋರಾಟ ಹಮ್ಮಿಕೊಳ್ಳಲಾಗಿದೆಂದರು.
ತುಂಗಭದ್ರಾ ಮತ್ತು ಕೃಷ್ಣಾ ನದಿ ತುಂಬಿ ಹರಿಯುತ್ತಿದೆ. ಆದರೆ, ರಾಯಚೂರು ತಾಲೂಕಿನಲ್ಲಿ ಮಾತ್ರ ಎರಡು ಬೆಳೆ ಮಾತ್ರ ಬೆಳೆಯಲಾಗುತ್ತದೆ. ಕೂಡಲೇ ರಾಯಚೂರು ತಾಲೂಕಿಗೆ ನೀರಾವರಿ ಸೌಲಭ್ಯ ಒದಗಿಸಬೇಕೆಂದರು. ಕಳೆದ ೧೦ ವರ್ಷಗಳ ಹಿಂದೆ ಜಿಲ್ಲೆಯಲ್ಲಿ ೧೬ ರಿಂದ ೧೭ ಕ್ವಿಂಟಲ್ ಹತ್ತಿ ಬೆಳೆಯಲಾಗುತ್ತಿತ್ತು. ಈಗ ಕೇವಲ ೯ ರಿಂದ ೧೦ ಕ್ವಿಂಟಲ್ ಮಾತ್ರ ಬೆಳೆಯಲಾಗುತ್ತಿದೆ. ಬೇರೆ ಬೆಳೆ ಬೆಳೆಯಬೇಕಾದರೇ, ರಾಯಚೂರು ತಾಲೂಕಿಗೆ ನೀರಾವರಿ ಸೌಲಭ್ಯ ಅತ್ಯವಶ್ಯಕವಾಗಿದೆ. ತಾಲೂಕಿನಲ್ಲಿ ಒಳ್ಳೆಯ ಫಲವತ್ತಾದ ಭೂಮಿ ಇದೆ. ನೀರಿಲ್ಲದೇ, ಕೇವಲ ಎರಡು ಬೆಳೆ ಮಾತ್ರ ಬೆಳೆಯಲಾಗುತ್ತಿದೆ.
ಆದ್ದರಿಂದ ಮುಂದಿನ ದಿನಗಳಲ್ಲಿ ರೈತ ಮುಖಂಡರೊಂದಿಗೆ ದೊಡ್ಡ ಹೋರಾಟವನ್ನು ಮಾಡಲಾಗುತ್ತದೆಂದರು. ಕೂಡಲೇ ರಾಯಚೂರು ತಾಲೂಕಿಗೆ ನೀರಾವರಿ ಸೌಲಭ್ಯವನ್ನು ಮಾಡಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ಹಮ್ಮಿಕೊಳ್ಳಲಾಗುತ್ತದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಗಮೇಶ ನಾಯಕ, ಶಿವಪ್ಪ ನಾಯಕ, ಈರಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.