ತಾಲಿಬಾನ್ ರಾಕ್ಷಸ ಕ್ರೌರ್ಯ ಬಯಲು

ಕಾಬೂಲ್, ಆ.೨೦- ಆಫ್ಘಾನಿಸ್ತಾನದಲ್ಲಿ ಅಧಿಕಾರ ಹಿಡಿದ ಐದನೇ ದಿನದಲ್ಲಿ ತನ್ನ ವರಸೆ ಬದಲಾಯಿಸಿರುವ ತಾಲಿಬಾನ್, ತನ್ನ ವಿರೋಧಿಗಳ ಪ್ರತೀಕಾರಕ್ಕೆ ಹೆಜ್ಜೆಯನ್ನಿಟ್ಟಿದ್ದು, ಮಹಿಳೆಯರ ಮೇಲೂ ಹಲವು ನಿರ್ಬಂಧಗಳನ್ನು ಹೇರಿದ್ದು, ಭಯಭೀತಿಗೆ ಒಳಗಾಗಿರುವ ಜನ ಪ್ರಾಣ ರಕ್ಷಿಸಿಕೊಳ್ಳಲು ಹೆಣಗಾಡುವಂತಾಗಿದೆ.

ವಿರೋಧಿಗಳ ವಿರುದ್ಧ ಪ್ರತೀಕಾರಕ್ಕೆ ಮುಂದಾಗುವುದಿಲ್ಲ ಎನ್ನುತ್ತಲೇ ತಮ್ಮ ವಿರುದ್ಧ ಅಮೆರಿಕ ಮತ್ತು ನ್ಯಾಟೋ ಪಡೆಗಳ ಜೊತೆ ಕೆಲಸ ಮಾಡಿದ್ದ ಜನರ ಹಾಗೂ ಭಾರತದ ರಾಯಭಾರಿ ಕಚೇರಿಯಲ್ಲಿ ಸೇವೆ ಸಲ್ಲಿಸಿದ ಭಾರತೀಯರ ಹುಡುಕಾಟವನ್ನು ತಾಲಿಬಾನ್ ತೀವ್ರಗೊಳಿಸುತ್ತಿದೆ ಎಂದು ವಿಶ್ವಸಂಸ್ಥೆಯ ಗೌಪ್ಯ ದಾಖಲೆ ಬಹಿರಂಗಗೊಳಿಸಿದೆ.

ಕೆಲ ದಾಖಲೆ ಪ್ರಕಾರ, ಆಫ್ಘಾನ್ ಮಿಲಿಟರಿ, ಪೊಲೀಸ್ ಮತ್ತು ಗುಪ್ತಚರ ಘಟಕಗಳ ಕೇಂದ್ರಸ್ಥಾನದಲ್ಲಿ ಕೆಲಸ ಮಾಡಿದವರು ಹೆಚ್ಚಿನ ಅಪಾಯದಲ್ಲಿದ್ದಾರೆ ಎಂದು ತಿಳಿದುಬಂದಿದೆ.

ತಾಲಿಬಾನ್ ಉಗ್ರರು ತಾವು ಬಂಧಿಸಲು ಬಯಸುವ ವ್ಯಕ್ತಿಗಳು ಮತ್ತು ಅವರ ಕುಟುಂಬ ಸದಸ್ಯರ ಮನೆ-ಮನೆಗೆ ಭೇಟಿ ನೀಡುತ್ತಿದ್ದಾರೆ.ಜತೆಗೆ ಕಾಬೂಲ್ ವಿಮಾನ ನಿಲ್ದಾಣದ ದಾರಿಯಲ್ಲಿ ಉಗ್ರರು ವ್ಯಕ್ತಿಗಳನ್ನು ಪರೀಕ್ಷಿಸುತ್ತಿದ್ದಾರೆ.

ರಾಜಧಾನಿ ಕಾಬೂಲ್ ಮತ್ತು ಜಲಾಲಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದ್ದಾರೆ ಎಂದೂ ಗುಪ್ತಚರ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮಾಹಿತಿ ನೀಡಲು ನಿರಾಕರಿಸುವ ಕುಟುಂಬಗಳನ್ನು ಶರಿಯಾ ಕಾನೂನಿನ ಪ್ರಕಾರ ವಿಚಾರಣೆಗೆ ಒಳಪಡಿಸುತ್ತಾರೆ ಮತ್ತು ಶಿಕ್ಷಿಸುತ್ತಿದ್ದಾರೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕ್ರಿಶ್ಚಿಯನ್ ನೆಲ್ಲೆಮನ್ ಎಎಫ್‌ಪಿಗೆ ತಿಳಿಸಿದರು.

ಪೋಸ್ಟ್ ಧ್ವಂಸ: ಆಫ್ಘಾನ್‌ನಲ್ಲಿ ಆಂತರಿಕ ಸಂಘರ್ಷ ಸೃಷ್ಟಿಯಾಗಿದ್ದು, ನಗರದಾದ್ಯಂತ ಇದ್ದ ಮಹಿಳೆಯರ ಸೌಂದರ್ಯವರ್ಧಕಕ್ಕೆ ಸಂಬಂಧಿಸಿದ ಜಾಹೀರಾತುಗಳನ್ನು ತೆರವುಗೊಳಿಸುವ ಕಾರ್ಯ ಶುರುವಾಗಿದೆ.

ಕಟ್ಟಾ ಸಂಪ್ರದಾಯವಾದಿಗಳಾದ ತಾಲಿಬಾನಿಗಳ ಆಡಳಿತದಲ್ಲಿ ಇಂಥ ಪೋಸ್ಟರ್‌ಗಳಿಗೆ, ಅವಕಾಶವಿರುವುದಿಲ್ಲ. ಹಾಗಾಗಿ, ಅಂಥ ಪೋಸ್ಟರ್‌ಗಳ ಮೇಲೆ ಬಿಳಿಸುಣ್ಣ ಬಳಿಯುವ ಮೂಲಕ ಅವುಗಳನ್ನು ಮರೆಮಾಚಲಾಗುತ್ತಿದೆ.
ಇನ್ನೂ ಕೆಲವಡೆ ಆ ಮಹಿಳೆಯರ ಭಾವಚಿತ್ರಗಳಿರುವ ಜಾಹೀರಾತು ಫಲಕಗಳನ್ನು ಧ್ವಂಸ ಮಾಡಲಾಗುತ್ತಿದೆ.

ಕೈದಿಗಳ ಬಿಡುಗಡೆ: ತಾಲಿಬಾನ್‌ನ ನಾಯಕ ಹಿಬತುಲ್ಲಾ ಅಖುಂಡಜಾದ, ಅಫ್ಘಾನಿಸ್ತಾನದ ಎಲ್ಲಾ ಜೈಲುಗಳಿಂದ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ ಎಂದು ಸಂಘಟನೆಯ ವಕ್ತಾರರು ತಿಳಿಸಿದ್ದಾರೆ.

ಇಸ್ಲಾಮಿಕ್ ಎಮಿರೇಟ್‌ನ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಡಜಾದ ಎಲ್ಲಾ ಜೈಲುಗಳಿಂದ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾನೆ.

ಇನ್ನೊಂದೆಡೆ ಭಾನುವಾರ ತಾಲಿಬಾನ್‌ರ ದಾಳಿಯ ನಡುವೆ ಪರಿಸ್ಥಿತಿಯ ಲಾಭ ಪಡೆದು, ಆಫ್ಘಾನಿಸ್ತಾನದ ಚರಿಕರ್ ಜೈಲಿನಿಂದ ನೂರಾರು ಕೈದಿಗಳು ಪಲಾಯನಗೈದಿದ್ದಾರೆ. ಬ್ರಿಗೇಡಿಯರ್ ಜನರಲ್ ಅಬ್ದುಲ್ ರೌಫ್ ಉರುಜ್ಗಾನಿ ಮತ್ತು ಪ್ರಾಂತೀಯ ಪೊಲೀಸ್ ಮುಖ್ಯಸ್ಥರು ಜೈಲು ನಿರ್ದೇಶಕರ ನಿರ್ಲಕ್ಷ್ಯದಿಂದಾಗಿ ಕೈದಿಗಳು ತಪ್ಪಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಮನೆ ಸೇರಿದ ಪತ್ರಕರ್ತೆ..!

ಆಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಮಹಿಳೆಯರಿಗೂ ಅವರ ಹಕ್ಕುಗಳು ಸಿಗುವಂತೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಕಾಬೂಲ್ ವಶಪಡಿಸಿಕೊಂಡ ಮಾರನೇ ದಿನದಿಂದಲೇ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳಲ್ಲಿ ಮಹಿಳೆಯರು ಕೆಲಸಕ್ಕೆ ಬರದಂತೆ ತಡೆಯುತ್ತಿದ್ದಾರೆ.

ಖ್ಯಾತ ನಿರೂಪಕಿ, ಪತ್ರಕರ್ತೆ ಶಬನಂ ದಾವ್ರನ್ ಅವರನ್ನು ಕೆಲಸದಿಂದ ವಜಾ ಮಾಡಿ, ಉಗ್ರರು ಮನೆಗೆ ಕಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಶಬನಂ, ತಾಲಿಬಾನ್ ಉಗ್ರಗಾಮಿಗಳು ಮಹಿಳೆಯರಿಗೆ ಓದಲು ಮತ್ತು ಕೆಲಸ ಮಾಡಲು ಅವಕಾಶ ನೀಡುವುದಾಗಿ ಆಶ್ವಾಸನೆ ನೀಡಿದ್ದರು. ಹಾಗಾಗಿ ಎಂದಿನಂತೆ ನಾನು ಕೆಲಸಕ್ಕೆ ಹೋದೆ. ನಾನು ಮಹಿಳೆ ಎನ್ನುವ ಕಾರಣಕ್ಕೆ ತಾಲಿಬಾನಿಗಳು ನನ್ನನ್ನು ಕೆಲಸಕ್ಕೆ ಹೋಗಲು ಬಿಡಲಿಲ್ಲ ಎಂದರು.

ದುರಂತ ಕಂಡ ಫುಟ್ಬಾಲ್ ಆಟಗಾರ..!

ತಾಲಿಬಾನಿಗಳು ಆಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿದ್ದರಿಂದ ಹೆದರಿದ ಸ್ಥಳೀಯರು ದೇಶ ತೊರೆಯಲು ಮುಂದಾಗಿದ್ದರು. ಈ ವೇಳೆ ಅಮೆರಿಕಾ ವಿಮಾನ ಟೇಕಾಫ್ ವೇಳೆ ಟೈರ್ ಮೇಲೆ ಹತ್ತಿ ಪಲಾಯನಕ್ಕೆ ಮುಂದಾಗಿದ್ದರು. ಆದರೆ ಆಗಸದ ಮಧ್ಯದಲ್ಲಿ ವಿಮಾನದಿಂದ ಇಬ್ಬರು ಕೆಳಗೆ ಬಿದ್ದು ಮೃತಪಟ್ಟಿದ್ದರು.

ವಿಮಾನದಿಂದ ಕೆಳಗೆ ಬಿದ್ದು ಮೃತಪಟ್ಟವರ ಪೈಕಿ ಓರ್ವ ಫುಟ್ಬಾಲ್ ಆಟಗಾರ ಎಂದು ತಿಳಿದುಬಂದಿದೆ. ೧೯ ವರ್ಷದ ಝಾಕಿ ಅನ್ವಾರಿ ಆಟಗಾರ ದುರಂತ ಅಂತ್ಯ ಕಂಡಿದ್ದಾನೆ.

ಅನ್ವರಿ ಸಾವನ್ನು ಅಫ್ಘಾನಿಸ್ತಾನದ ದೈಹಿಕ ಶಿಕ್ಷಣ ಮತ್ತು ಕ್ರೀಡೆಗಳ ಜನರಲ್ ಡೈರೆಕ್ಟರೇಟ್ ದೃಢಪಡಿಸಿದೆ.೧೬ ವರ್ಷದವನಿದ್ದಾಗಿನಿಂದ ಅನ್ವರಿ ಅಫ್ಘಾನ್ ರಾಷ್ಟ್ರೀಯ ಯುವ ತಂಡದಲ್ಲಿ ಆಡುತ್ತಿದ್ದ ಎಂದೂ ತಿಳಿದುಬಂದಿದೆ.

ಕ್ಕಳನ್ನು ಎಸೆದ ತಾಯಂದಿರು.!

ತಾಲಿಬಾನ್ ಉಗ್ರರಿಂದ ತಮ್ಮ ಮಕ್ಕಳನ್ನು ರಕ್ಷಿಸುವ ಪ್ರಯತ್ನದಲ್ಲಿ ಕಾಬೂಲ್‌ನಲ್ಲಿರುವ ಆಫ್ಘಾನಿಸ್ತಾನ ಮಹಿಳೆಯರು ತಮ್ಮ ಮಕ್ಕಳನ್ನು ಕಾಬೂಲ್‌ನ ಹಮೀದ್ ಕರ್ಜೈ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಬಳಿಯ ಮುಳ್ಳುತಂತಿಯ ತಡೆಗೋಡೆಗಳ ಮೇಲೆ ಎಸೆದಿದ್ದಾರೆ ಎಂದು ಹಿರಿಯ ಬ್ರಿಟಿಷ್ ಸಶಸ್ತ್ರ ಪಡೆಗಳನ್ನು ಉಲ್ಲೇಖಿಸಿ ಸ್ಕೈ ನ್ಯೂಸ್ ವರದಿ ಮಾಡಿದೆ.