ತಾಲಿಬಾನ್ ನಾಯಕರಲ್ಲಿ ಬ್ಲೂಟಿಕ್ ಕ್ರೇಜ್!

ಕಾಬೂಲ್,ಜ.೧೭-ಈಗಾಗಲೇ ಮಹಿಳೆಯರಿಗೆ ವಿವಿಧ ಇಲಾಖೆಗಳಲ್ಲಿ ಕಠಿಣ ನಿರ್ಬಂಧ ವಿಧಿಸುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವ ತಾಲಿಬಾನ್ ನಾಯಕರು ಇದೀಗ ಟ್ವಿಟರ್‌ನಲ್ಲಿ ಬ್ಲೂಟಿಕ್ ಖರೀದಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ. ಈಗಾಗಲೇ ಹಲವು ನಾಯಕರು ಬ್ಲೂಟಿಕ್ ಹೊಂದಿದ್ದು, ಇದರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಹಿಂದೆ ಟ್ವಿಟರ್‌ನಲ್ಲಿ ಬ್ಲೂಟಿಕ್ ಅನ್ನು ಖರೀದಿಸುವ ವ್ಯವಸ್ಥೆ ಇರಲಿಲ್ಲ. ಅಲ್ಲದೆ ಪ್ರತಿ ಷ್ಠಿತ ವ್ಯಕ್ತಿಗಳು, ಸಕ್ರಿಯ, ಪರಿಶೀಲಿಸಲಾದ ನೈಜ ಅಕೌಂಟ್‌ಗಳ ಮೌಲ್ಯಮಾಪನವನ್ನು ಬ್ಲೂಟಿಕ್ ಖಾತೆಗಳು ತೋರಿಸುತ್ತಿತ್ತು. ಆದರೆ ಎಲಾನ್ ಮಸ್ಕ್ ಟ್ವಿಟರ್ ಸಂಸ್ಥೆಯನ್ನು ಖರೀದಿಸಿದ ನಂತರ ಇದೆಲ್ಲವೂ ಸದ್ಯ ಬದಲಾಗಿದೆ. ಇದೀಗ ಒಬ್ಬ ವ್ಯಕ್ತಿಗೆ ಬ್ಲೂಟಿಕ್ ಬೇಕಿದ್ದರೆ ಹಣ ಪಾವತಿ ಮಾಡಿ ಖರೀದಿಸಬೇಕಿದೆ. ಈ ಹಿನ್ನೆಲೆಯಲ್ಲಿ ಇದೀಗ ತಾಲಿಬಾನ್‌ನ ನಾಯಕರು ಇದೇ ಕಾರಣಕ್ಕೆ ಬ್ಲೂಟಿಕ್ ಅನ್ನು ಖರೀದಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಅಲ್ಲದೆ ಇದೀಗ ಬಳಕೆದಾರರು ಹೊಸ ಟ್ವಿಟರ್ ಬ್ಲೂ ಸೇವೆಯ ಮೂಲಕ ಅವುಗಳನ್ನು ಖರೀದಿಸಬಹುದು. ಅಫ್ಘಾನಿಸ್ತಾನದಲ್ಲಿ ಸದ್ಯ ಕನಿಷ್ಠ ಇಬ್ಬರು ತಾಲಿಬಾನ್ ಅಧಿಕಾರಿಗಳು ಮತ್ತು ನಾಲ್ಕು ಪ್ರಮುಖ ಬೆಂಬಲಿಗರು ಚೆಕ್‌ಮಾರ್ಕ್‌ಗಳನ್ನು ಬಳಸುತ್ತಿದ್ದಾರೆ. ತಾಲಿಬಾನ್‌ನ ಮಾಹಿತಿ ವಿಭಾಗದ ಮುಖ್ಯಸ್ಥ ಹೆದಯತುಲ್ಲಾ ಹೆದಾಯತ್ ಈಗಾಗಲೇ ಬ್ಲೂ ಟಿಕ್ ಅನ್ನು ಹೊಂದಿದ್ದಾರೆ. ಸದ್ಯ ಹೆದಾಯತ್ ಅವರು ಟ್ವಿಟರ್‌ನಲ್ಲಿ ೧೮೭,೦೦೦ ಫಾಲೋವರ್ಸ್‌ಗಳನ್ನು ಹೊಂದಿದ್ದು, ನಿಯಮಿತವಾಗಿ ತಾಲಿಬಾನ್ ಆಡಳಿತಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪೋಸ್ಟ್ ಮಾಡುತಿರುತ್ತಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ ಅವರು ಕಳೆದ ತಿಂಗಳು ಪಾವತಿಸಿದ ನೀಲಿ ಟಿಕ್ ಅನ್ನು ತೆಗೆದುಹಾಕಿದ್ದರು. ಆದರೆ ಸದ್ಯ ಅವರು ಬ್ಲೂಟಿಕ್ ಮರಳಿ ಪಡೆದುಕೊಂಡಿದ್ದಾರೆ. ಅಫ್ಘಾನ್ ಮಾಹಿತಿ ಮತ್ತು ಸಂಸ್ಕೃತಿ ಸಚಿವಾಲಯದ ಮಾಧ್ಯಮದ ಮುಖ್ಯಸ್ಥ ಅಬ್ದುಲ್ ಹಕ್ ಹಮ್ಮದ್ ಅವರು ಟ್ವಿಟರ್‌ನಲ್ಲಿ ೧೭೦,೦೦೦ ಅನುಯಾಯಿಗಳನ್ನು ಹೊಂದಿದ್ದು, ಇದೀಗ ಬ್ಲೂ ಟಿಕ್ ಕೂಡ ಪಡೆದುಕೊಂಡಿದ್ದಾರೆ. ಅಲ್ಲದೆ ಪ್ರಮುಖ ತಾಲಿಬಾನ್ ಬೆಂಬಲಿಗರು ಕೂಡ ಬ್ಲೂ ಟಿಕ್ ಅನ್ನು ಪಡೆದುಕೊಂಡಿದ್ದಾರೆ. ಸದ್ಯ ಈ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ. ಆಗಸ್ಟ್ ೨೦೨೧ ರಲ್ಲಿ ಕಾಬೂಲ್‌ನಲ್ಲಿ ಅಧಿಕಾರಕ್ಕೆ ಮರಳಿದ ನಂತರ, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಸೇರಿದಂತೆ ಹಿಂದಿನ ಆಡಳಿತವು ನಡೆಸುತ್ತಿದ್ದ ಪರಿಶೀಲಿಸಿದ ಖಾತೆಗಳನ್ನು ತಾಲಿಬಾನ್ ತನ್ನ ವಶಕ್ಕೆ ವಹಿಸಿಕೊಂಡಿದೆ. ಅಲ್ಲದೆ ಅಲ್ಲಿನ ಕ್ರೀಡಾ ಸಂಸ್ಥೆಯ ಖಾತೆಯು ಈಗ ಗೋಲ್ಡನ್ ಟಿಕ್ ಹೊಂದಿದೆ.