ತಾಲಿಬಾನಿಗಳಿಂದ ಐಎಸ್ ಉಗ್ರನ ಹತ್ಯೆ

ಕಾಬೂಲ್, ಎ.೨೬- ೨೦೨೧ರಲ್ಲಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆಸಲಾಗಿದ್ದ ಭಾರೀ ವಿಧ್ವಂಸಕ ಬಾಂಬ್ ದಾಳಿಯ ಯೋಜನೆ ರೂಪಿಸಿದ್ದ ಇಸ್ಲಾಮಿಕ್ ಸ್ಟೇಟ್ ಐಎಸ್) ಗುಂಪಿನ ಮಾಸ್ಟರ್‌ಮೈಂಡ್ ಅನ್ನು ಅಫ್ಘಾನಿಸ್ತಾನದ ಆಡಳಿತಾರೂಢ ತಾಲಿಬಾನ್ ಹತ್ಯೆ ಮಾಡಿದೆ ಎಂದು ಅಮೆರಿಕಾ ಅಧಿಕಾರಿಗಳು ಅಧಿಕೃತವಾಗಿ ಘೋಷಿಸಿದ್ದಾರೆ. ಇನ್ನು ಹತ್ಯೆಗೀಡಾದ ಇಸ್ಲಾಮಿಕ್ ಸ್ಟೇಟ್‌ಗೆ ಸೇರಿದ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಲಾಗಿಲ್ಲ.
೨೦೨೧ರಲ್ಲಿ ತಾಲಿಬಾನ್ ಸರ್ಕಾರ ಅಫ್ಘಾನಿಸ್ತಾನದಲ್ಲಿ ಆಡಳಿತಕ್ಕೆ ಬಂದ ಬಳಿಕ ನಾಗರಿಕರು ದೇಶ ಬಿಟ್ಟು ಪಲಾಯನ ಮಾಡುತ್ತಿದ್ದ ಸಮಯದಲ್ಲಿ ಆಗಸ್ಟ್‌ನಲ್ಲಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭೀಕರ ಬಾಂಬ್ ಸ್ಫೋಟ ಸಂಭವಿಸಿತ್ತು.
ಈ ದುರಂತದಲ್ಲಿ ೧೭೦ ನಾಗರಿಕರು ಮತ್ತು ೧೩ ಅಮೆರಿಕಾ ಸೈನಿಕರು ಮೃತಪಟ್ಟಿದ್ದರು. ಇದೀಗ ಬಾಂಬ್ ಸ್ಫೋಟದ ಯೋಜನೆ ರೂಪಿಸಿದ್ದ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ವ್ಯಕ್ತಿಯನ್ನು ತಾಲಿಬಾನ್ ಹತ್ಯೆ ಮಾಡಿದೆ.
ಇನ್ನು ಮೂಲಗಳ ಪ್ರಕಾರ ಐಎಸ್‌ಗೆ ಸೇರಿದ ವ್ಯಕ್ತಿಯನ್ನು ವಾರಗಳ ಹಿಂದೆಯೇ ಹತ್ಯೆ ನಡೆಸಲಾಗಿದ್ದು, ಗುರುತು ಪತ್ತೆ ಹಚ್ಚುವಲ್ಲಿ ಹಾಗೂ ಸಾವನ್ನು ಖಚಿತಪಡಿಸುವಲ್ಲಿ ಕೊಂಚ ಸಮಯ ವ್ಯರ್ಥವಾಗಿದೆ ಎನ್ನಲಾಗಿದೆ. ಇನ್ನು ಗುಪ್ತಚರ ಸಂಗ್ರಹಣೆ ಮತ್ತು ಪ್ರದೇಶದ ಮೇಲ್ವಿಚಾರಣೆಯ ಮೂಲಕ ಐಎಸ್ ನಾಯಕ ಸಾವನ್ನಪ್ಪಿದ್ದಾನೆ ಎಂದು ಅವರು ನಿರ್ಧರಿಸಿದ್ದಾರೆ ಎಂದು ಯುಎಸ್ ಅಧಿಕಾರಿಗಳು ಹೇಳಿದ್ದಾರೆ.
ಆದರೂ ಕಾಬೂಲ್ ವಿಮಾನ ನಿಲ್ದಾಣದ ಬಾಂಬ್ ದಾಳಿಗೆ ಕಾರಣ ಎಂದು ತಾಲಿಬಾನಿಗಳು ಹೇಗೆ ತಿಳಿದುಕೊಂಡರು ಎಂಬುದರ ಕುರಿತು ಹೆಚ್ಚಿನ ವಿವರಗಳನ್ನು ನೀಡಲಿಲ್ಲ.
ಆದರೂ ಸದ್ಯ ಹತ್ಯೆಗೀಡಾದ ವ್ಯಕ್ತಿ ನಿಜವಾಗಿಯೂ ದಾಳಿಯ ಪ್ರಮುಖ ರೂವಾರಿಯಾಗಿದ್ದಾನೆ ಎಂದು ಸರ್ಕಾರದ ತಜ್ಞರು ಹೆಚ್ಚಿನ ವಿಶ್ವಾಸ ಹೊಂದಿದ್ದಾರೆ ಎಂದು ಯುಎಸ್ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.