
ಬೀಜಿಂಗ್ (ಚೀನಾ), ಜು.೭- ಒಂದು ಕಾಲದಲ್ಲಿ ಅಮೆರಿಕಾದಲ್ಲಿ ತನ್ನ ಆಕರ್ಷಕ ರೀತಿಯ ಪಾಪ್ ಹಾಡುಗಳ ಮೂಲಕ ರಂಜಿಸಿದ್ದ ತಾರೆ, ಹಾಂಕಾಂಗ್ ಮೂಲದ ಕೊಕೊ ಲೀ ಇದೀಗ ಖಿನ್ನತೆಯಿಂದ ಆತ್ಮಹತ್ಯೆಗೆ ಯತ್ನಿಸಿ, ಬಳಿಕ ಚಿಕಿತ್ಸೆಗೆ ಸ್ಪಂದಿಸದ ಮೃತಪಟ್ಟ ಪ್ರಕರಣ ಇದೀಗ ಚೀನಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಚೀನಾದ ಹಾಂಕಾಂಗ್ ಮೂಲದ ಕೊಕೊ ಚಿಕ್ಕ ವಯಸ್ಸಿನಲ್ಲೇ ಅಮೆರಿಕಾಗೆ ತೆರಳಿ, ಬಳಿಕ ಅಲ್ಲೇ ತನ್ನ ಪಾಪ್ ಜೀವನವನ್ನು ಮುಂದುವರೆಸಿ, ಅಪಾರ ಯಶಸ್ವಿ ಗಳಿಸಿದ್ದರು. ಆದರೆ ತೀವ್ರ ರೀತಿಯ ಖಿನ್ನತೆಯಿಂದ ಬಳಲುತ್ತಿದ್ದ ಕೊಕೊ ಆದಿತ್ಯವಾರದಂದು ಆತ್ಮಹತ್ಯೆಗೆ ಯತ್ನಿಸಿದ್ದು, ಬಳಿಕ ಕೋಮಾಗೆ ಜಾರಿದ್ದರು. ಆದರೆ ಅಂತಿಮವಾಗಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಸದ್ಯ ಕೊಕೊ ಸಾವಿನ ಪ್ರಕರಣವು ಇಡೀ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಮಾನಸಿಕ ಆರೋಗ್ಯದ ಬಗ್ಗೆ ನಾಗರಿಕರು ಜಾಲತಾಣಗಳಲ್ಲಿ ಗಂಭೀರ ರೀತಿಯ ಚರ್ಚೆ ನಡೆಸುತ್ತಿದ್ದಾರೆ. ಕೊಕೊ ಅಮೆರಿಕಾದಲ್ಲಿ ಪ್ರಸಿದ್ದಿ ಪಡೆದುಕೊಂಡಿದ್ದರೂ ಚೀನಾದಲ್ಲೂ ಭಾರೀ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಹಾಗಾಗಿ ಸಹಜವಾಗಿಯೇ ಕೊಕೊ ಸಾವಿಗೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ?ನಮಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅವಳು ಯಾವಾಗಲೂ ಹಾಡು ಹಾಗೂ ನೃತ್ಯದ ಮೂಲಕ ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವದ ಸೆಲೆಬ್ರಿಟಿಯಾಗಿದ್ದರು ಎಂದು ಅನೇಕ ಮಂದಿ ಚೀನಾದ ಸಾಮಾಜಿಕ ಜಾಲತಾಣ ವೀಬೋದಲ್ಲಿ ಬರೆದಿದ್ದಾರೆ. ಅದೂ ಅಲ್ಲದೆ ಖಿನ್ನತೆಯ ಬಗ್ಗೆ ಕೂಡ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದು, ಜೊತೆಗೆ ಜನರು ಜೀವನಕ್ರಮಗಳಲ್ಲಿ ಬದಲಾವಣೆ ತರಬೇಕಿದೆ ಎಂಬ ಮನವಿಗಳನ್ನು ಕೂಡ ಪೋಸ್ಟ್ ಮಾಡಲಾಗುತ್ತಿದೆ. ಅದೂ ಅಲ್ಲದೆ ಖಿನ್ನತೆಯು ಮನುಷ್ಯನ ಆರೋಗ್ಯ ಮೇಲೆ ಯಾವ ರೀತಿಯ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಕೂಡ ಚೀನಾದಲ್ಲಿ ನಾಗರಿಕರು ಚರ್ಚೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕೊಕೊ ಅವರ ಆತ್ಮಹತ್ಯೆ ಪ್ರಕರಣದ ಚೀನಾದ ನಾಗರಿಕರನ್ನು ಚಿಂತೆಗೀಡು ಮಾಡಿದೆ.