
ರಾಯಚೂರು: ತಾರಾನಾಥ ಶಿಕ್ಷಣ ಸಂಸ್ಥೆಯ ಚನ್ನಬಸಮ್ಮ ಎಮ್. ನಾಗಪ್ಪ ಬಾಲಕಿಯರ ಕಲಾ ಮತ್ತು ವಾಣಿಜ್ಯ ವಿಭಾಗ ಪದವಿಪೂರ್ವ ಕಾಲೇಜು ರಾಯಚೂರಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಗಿರಿಜಾ ವಕೀಲರು ಕೇಕ್ ಕಟ್ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಇಂದಿನ ವಿಶೇಷ ದಿನವು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿದ ಸಾಂಸ್ಕೃತಿಕ, ರಾಜಕೀಯ ಮತ್ತು ಸಾಮಾಜಿಕ ಆರ್ಥಿಕ ಸಾಧನೆಗಳನ್ನು ಸ್ಮರಿಸುತ್ತದೆ. ಲಿಂಗ ಸಮಾನತೆ ಮತ್ತು ಸಮಾನತೆಗಾಗಿ ಹೋರಾಟದಲ್ಲಿ ತೊಡಗಿರುವ ಎಲ್ಲರಿಗೂ ಇದು ಮಹತ್ವದ ಸಂದರ್ಭವಾಗಿದೆ ,
ಅಷ್ಟೇ ಅಲ್ಲ ಹಿಂದೊಂದು ಕಾಲವಿತ್ತು. ಮಹಿಳೆಯರು ಮಕ್ಕಳನ್ನು ಹೆತ್ತು, ಅವರ ಪೋಷಣೆ ಮಾಡಿ, ಕುಟುಂಬಸ್ಥರಿಗಾಗಿ ಹಗಲಿರುಳು ಮನೆಯಲ್ಲಿ ದುಡಿಯುತ್ತ, ಎದುರು ಮಾತನಾಡದೆ ನಾಲ್ಕು ಗೋಡೆಗಳ ಮಧ್ಯೆ ಜೀವನ ಕಳಿಯಬೇಕಿತ್ತು. ಆದ್ರೆ ಈಗ ಕಾಲ ಬದಲಾಗಿದೆ. ಮಹಿಳೆಯರಿಗೂ ಪುರುಷರಷ್ಟೇ ಸಮಾನ ಸ್ಥಾನ ನೀಡಲಾಗಿದೆ. ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ಮುನ್ನುಗ್ಗುತ್ತಿದ್ದಾಳೆ. ತನಗೆ ಆಗುತ್ತಿರುವ ಶೋಷಣೆ ವಿರುದ್ಧ ತಿರುಗಿ ಬೀಳುತ್ತಿದ್ದಾಳೆ. ಇಂದು ಈ ಮಹಿಳೆಯರಿಗಾಗಿ ಇಡೀ ಜಗತ್ತಿನಾದ್ಯಂತ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಅಂತರಾಷ್ಟ್ರೀಯ ಮಹಿಳಾ ದಿನದ ಮಹತ್ವವು ಲಿಂಗ ಸಮಾನತೆಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಮತ್ತು ಅದನ್ನು ಸಾಧಿಸುವ ನಿಟ್ಟಿನಲ್ಲಿ ಕ್ರಿಯೆಯನ್ನು ಪ್ರೇರೇಪಿಸುವ ಸಾಮರ್ಥ್ಯದಲ್ಲಿದೆ. ಇದು ಮಹಿಳಾ ಹಕ್ಕುಗಳನ್ನು ಮುನ್ನಡೆಸುವಲ್ಲಿ ಮಾಡಿದ ಪ್ರಗತಿಯ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಲಿಂಗ ಆಧಾರಿತ ತಾರತಮ್ಯ, ಅಸಮಾನತೆ ಮತ್ತು ಹಿಂಸಾಚಾರವನ್ನು ಪರಿಹರಿಸಲು ಇನ್ನೂ ಮಾಡಬೇಕಾದ ಕೆಲಸ.ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯರಾದ ವೆಂಕಟೇಶ್ ದೊಡ್ಡಮನಿ ಅವರು ಮಾತನಾಡುತ್ತಾ,ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ೨೦೨೩ ರ ಥೀಮ್, “ಎಂಬ್ರೇಸ್ ಇಕ್ವಿಟಿ”, ಇಕ್ವಿಟಿ ಮತ್ತು ಸಮಾನತೆಯ ನಡುವಿನ ನಿರ್ಣಾಯಕ ವ್ಯತ್ಯಾಸವನ್ನು ಎತ್ತಿ ತೋರಿಸುತ್ತದೆ. ಸಮಾನತೆ ಎಂದರೆ ಎಲ್ಲರಿಗೂ ಒಂದೇ ರೀತಿಯ ಸಂಪನ್ಮೂಲಗಳು ಮತ್ತು ಅವಕಾಶಗಳನ್ನು ನೀಡುವುದು ಎಂದಾದರೆ, ಈಕ್ವಿಟಿಯು ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ಸಂದರ್ಭಗಳನ್ನು ಹೊಂದಿದೆ ಎಂದು ಗುರುತಿಸುತ್ತದೆ ಮತ್ತು ಸಮಾನ ಫಲಿತಾಂಶವನ್ನು ತಲುಪಲು ಅಗತ್ಯವಿರುವ ಸಂಪನ್ಮೂಲಗಳು ಮತ್ತು ಅವಕಾಶಗಳನ್ನು ನಿಯೋಜಿಸುತ್ತದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿ ಸುರೇಶ್ ಇವರು ಮಾತನಾಡುತ್ತಾ, ಮಹಿಳೆ ಅಬಲೆಯಿಂದ ಸಬಲೆಯಾದ ಹಾದಿಯ ಯಶಸ್ಸಿನ ಸಂಭ್ರಮವನ್ನು ಆಚರಿಸಲಾಗುತ್ತಿದೆ ಎಂದು ಹೇಳುತ್ತಾ ದೇಶದ ಪ್ರತಿಯೊಬ್ಬ ಮಹಿಳೆಯರಿಗೂ ಶುಭ ಹಾರೈಸಿದರು.
ಡಾ ಅರುಣಾ ಹಿರೇಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶೈಲಜಾ ಮತ್ತು ಅನ್ನಪೂರ್ಣ ಪ್ರಾರ್ಥಿಸಿದರು. ಉಪನ್ಯಾಸಕರಾದ ಮಹೇಶ, ರೇಣುಕಾ ಮತ್ತು ವಿದ್ಯಾ ಅತಿಥಿಗಳಿಗೆ ಗೌರವ ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಮಹೇಶ್ವರಿ ನಿರೂಪಿಸಿದರು. ರಾಘಮ್ಮ ಸ್ವಾಗತಿಸಿದರು. ಶಿವಲೀಲಾ ವಂದಿಸಿದರು. ಕಾರ್ಯಕ್ರಮದಲ್ಲಿ ನರಸಮ್ಮ, ಮುನಿಯಮ್ಮ, ರಮಣಮ್ಮ,ಸವಾರೆಮ್ಮ, ಲಕ್ಷ್ಮೀ , ಇಮ್ರಾನ್,ವಿರೇಶ.. ಮತ್ತಿತರರು ಪಾಲ್ಗೊಂಡಿದ್ದರು.