ತಾರಫೈಲ್‍ನಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ಪಾಲಿಕೆ ಮುಂದೆ ಪ್ರತಿಭಟನೆ

ಕಲಬುರಗಿ.ನ.17: ನಗರದ ವಾರ್ಡ್ ನಂಬರ್ 54ರಲ್ಲಿ ಬರುವ ತಾರಫೈಲ್ ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಮಂಜೂರು ಮಾಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗುರುವಾರ ವಿಜಯ್ ಸೇನೆ ಕಾರ್ಯಕರ್ತರು ಮಹಾನಗರ ಪಾಲಿಕೆಯ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಿ, ದೇವು ನೀಲೂರ್ ಮನೆಯಿಂದ ನರಸಪ್ಪ ಗುಡೂರ್ ಅವರ ಮನೆಯವರೆಗೂ 60 ಮೀಟರ್ ಉದ್ದದ ಸಿಸಿ ರಸ್ತೆ, ದೇವಿಂದ್ರಪ್ಪ ಉಳ್ಳೆಸುಗೂರ್ ಮನೆಯಿಂದ ಸರ್ಕಾರಿ ಪ್ರಾಥಮಿಕ ಶಾಲೆಯವರೆಗೆ 200 ಅಡಿ ಸಿಸಿ ರಸ್ತೆ, ನರಸಪ್ಪ ಗುಡೂರ್ ಮನೆಯಿಂದ ಎರಡು ಒಳ ಚರಂಡಿಗಳಿದ್ದು, ಒಳಚರಂಡಿ ತಪ್ಪಾಗಿ ನಿರ್ಮಿಸಿದ್ದಾರೆ. ಆದ್ದರಿಂದ ಅದನ್ನು ಸರಿಪಡಿಸಿ ರಸ್ತೆಗಳನ್ನು ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
ದೇವೆಂದ್ರ ಉಳ್ಳೆಸುಗೂರ್ ಮನೆಯಿಂದ ಶ್ರೀಧರ್ ಹುಲಿಮನೆವರೆಗೂ ಒಳಚರಂಡಿ ಕೈಗೊಳ್ಳುವಂತೆ, 14ನೇ ಅಡ್ಡರಸ್ತೆ, ಗುಡ್ ಶೆಪೋರ್ಡ್ ಮೆಥೋಡಿಸ್ಟ್ ಚರ್ಚ್ ಮತ್ತು ಬುದ್ದ ಮಂದಿರದಿಂದ ಆಂಜನೇಯ್ ದೇವಸ್ಥಾನದವರೆಗೂ 150 ಮೀಟರ್ ರಸ್ತೆ ನಿರ್ಮಾಣ ಮಾಡುವಂತೆ ಹಾಗೂ ಒಳಚರಂಡಿ ನಿರ್ಮಿಸುವಂತೆ ಅವರು ಆಗ್ರಹಿಸಿದರು.
ಎಲ್ಲ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸದೇ ಹೋದಲ್ಲಿ ಮಾನವ ಸರಪಳಿ ಮೂಲಕ ಉಗ್ರ ಹೋರಾಟ ರೂಪಿಸುವುದಾಗಿ ಅವರು ಎಚ್ಚರಿಸಿದರು.
ಸಂಘಟನೆಯ ಅಫಜಲಪುರ ತಾಲ್ಲೂಕು ಅಧ್ಯಕ್ಷ ನಾಗರಾಜ್ ರಾಂಪೂರೆ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಿಸಾರ್ ಅಹ್ಮದ್ ಖಾನ್, ಕಲ್ಯಾಣಿ ತಳವಾರ್, ಶಿವಲಿಂಗ್ ಗುತ್ತೇದಾರ್, ಅಲ್ಲಿಸಾಬ್, ಪುನಿತರಾಜ್ ಸಿ. ಕವಡೆ ಮುಂತಾದವರು ಪಾಲ್ಗೊಂಡಿದ್ದರು.