ತಾರದಾಳೆ ಕುಟುಂಬಕ್ಕೆ ಕಟಿಲು ಭೇಟಿ: ಸಾಂತ್ವನ

ಕಾಗವಾಡ,ಜೂ9: ಉಗಾರ ಬಿಕೆ ಗ್ರಾಮದ ನಿವಾಸಿ, ರಾಜ್ಯ ಯುವ ಮೋರ್ಚಾ ಕಾರ್ಯಾಲಯದ ಕಾರ್ಯದರ್ಶಿ ರಾಹುಲ ಪದ್ಮಣ್ಣ ತಾರದಾಳೆ(30) ಅವರು ಇತ್ತೀಚಿಗೆ ಕೊರೋನಾ ಸೋಂಕಿನಿಂದ ನಿಧನ ಹೊಂದಿದ್ದು ಅವರ ಮನೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ ಕಟೀಲ, ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ, ಭೇಟಿ ನೀಡಿ ಅವರ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.
ಮಂಗಳವಾರ ದಿ.8 ರಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ ಕಟೀಲ ಅವರು ರಾಹುಲ ಪದ್ಮಣ್ಣ ತಾರದಾಳೆಯವರ ಮನೆಗೆ ಭೇಟಿ ನೀಡಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಶ್ರದ್ದಾಂಜಲಿ ಅರ್ಪಿಸಿದರು.
ರಾಹುಲ ತಾರದಾಳೆ ಕಿರಿಯ ವಯಸ್ಸಿನವನಾಗಿದ್ದು ಇಂಥ ಘಟನೆ ಆಗಬಾರದಿತ್ತು. ವಿಧಿ ಅವರನ್ನು ಬೇಗ ಕರೆಯಿಸಿಕೊಂಡಿತು. ರಾಹುಲ ತಾರದಾಳೆ ಒಬ್ಬ ಒಳ್ಳೆಯ ಕಾರ್ಯಕರ್ತನಾಗಿದ್ದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯ ಯುವ ಮೋರ್ಚಾ ಕಾರ್ಯಾಲಯದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದನು. ಭಗವಂತನು ಅವರ ಕುಟುಂಬಸ್ಥರಿಗೆ ದು:ಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ ಮಾತನಾಡಿ ರಾಹುಲ ತಾರದಾಳೆ ಎಲ್ಲರೊಂದಿಗೆ ಬೆರೆಯುವ ಸ್ನೇಹ ಜೀವಿಯಾದ್ದರು. ಅವರು ಕಳೆದ ಹಲವಾರು ವರ್ಷಗಳಿಂದ ಉತ್ತಮ ಒಡನಾಟ ಹೊಂದಿದ್ದ, ಅಲ್ಲದೆ ನನ್ನ ಎರಡೂ ಚುನಾವಣೆಗಳಲ್ಲಿ ಓಡಾಟ ಮಾಡಿ ಗೆಲುವಿಗೆ ಕಾರಣಿಕರ್ತನಾಗಿದ್ದ. ಆತನನ್ನು ಕಳೆದಕೊಂಡು ನಮ್ಮೆಲ್ಲರಿಗೆ ನೋವು ಉಂಟಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಮತ್ತು ಅವರ ಕುಟುಂ¨ಕ್ಕೆ ದುಖ:ವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಸಚಿವ ಶ್ರೀಮಂತ ಪಾಟೀಲ ಶ್ರದ್ದಾಂಜಲಿ ಅರ್ಪಿಸಿದರು.
ಈ ವೇಳೆ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣಕುಮಾರ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಜಿಲ್ಲಾಧ್ಯಕ್ಷ ಡಾ ರಾಜೇಶ ನೇರ್ಲಿ, ಪಿಎಲ್‍ಡಿ ಬ್ಯಾಂಕಿನ ಅಧ್ಯಕ್ಷ ಶೀತಲಗೌಡ ಪಾಟೀಲ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ದೀಪಕ ಪಾಟೀಲ, ಉಗಾರ ಗ್ರಾಮ ಪಂಚಾಯತ್ ಅಧ್ಯಕ್ಷ ಭುಜಗೌಡ ಪಾಟೀಲ, ಮುಖಂಡರಾದ ಅಪ್ಪಾಸಾಬ ಚೌಗುಲಾ, ಯೊಗೇಶ ಕುಂಬಾರ, ಅನೀಲ ನಾವಲಿಗೇರ, ಪ್ರಮೋದ ಹೊಸುರೆ, ವಿಜಯ ಶಿಂಧೆ, ಅಮೀನ ಶೇಖ ಸೇರಿದಂತೆ ಅನೇಕರು ಇದ್ದರು.