ತಾಯ್ನಾಡ ಭಾಷೆ ಮರೆಯಬೇಡಿ-ಹೆಗ್ಗನ್ನವರ

ಸವಣೂರ,ನ9 ಇತ್ತೀಚಿನ ಆಧುನಿಕ ಯುಗದಲ್ಲಿ ಆಂಗ್ಲ ಮಾಧ್ಯಮದ ವ್ಯಾಮೋಹಕ್ಕೆ ಮಾರು ಹೋಗಿ ತಾಯ್ನಾಡಿನ ಕನ್ನಡ ಭಾಷೆಯನ್ನು ಮರೆಯಬೇಡಿ ಎಂದು ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಹೇಳಿದರು.

ನಗರದ ಮಾರುಕಟ್ಟೆ ಪ್ರದೇಶದಲ್ಲಿ ಕರ್ನಾಟಕ ರಾಜ್ಯ ರಕ್ಷಣಾ ಸಮಿತಿ ಹಾವೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಸಂಭ್ರಮ ಹಾಗೂ ಕರ್ನಾಟಕ ರಾಜ್ಯ ರಕ್ಷಣಾ ಸಮಿತಿ ತಾಲೂಕು ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಕನ್ನಡಾಂಬೆಯ ದ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮಾತೃ ಭಾಷೆಯಲ್ಲಿ ಪ್ರಭುತ್ವ ಸಾಧಿಸದಲ್ಲಿ ಉಳಿದೆಲ್ಲ ಭಾಷೆಗಳ ಮೇಲೆ ಪ್ರಭುತ್ವ ಸಾಧಿಸಬಹುದಾಗಿದೆ. ಕಾಲ ಗತಿಸಿದಂತೆ ನಮ್ಮ ಕನ್ನಡಿಗರಲ್ಲಿ ಕನ್ನಡ ಭಾಷೆಯ ಮೇಲೆ ತಾತ್ಸಾರ ಮನೋಭಾವನೆ ಬೆಳೆದು ಬರುತ್ತಿದೆ. 1990 ರಿಂದ ಈಚೆಗೆ ನಾವೆಲ್ಲರೂ ಆಂಗ್ಲ ಭಾಷೆಯ ವ್ಯಾಮೋಹಕ್ಕೊಳಗಾಗಿದ್ದೇವೆ.
ಆದ್ದರಿಂದ ಆಂಗ್ಲ ಭಾಷೆಯನ್ನು ವಿಷಯವಾಗಿ ಪರಿಗಣಿಸಿ ಅಧ್ಯಯನ ಮಾಡಿ, ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡುವುದು ಅವಶ್ಯವಾಗಿದೆ. ಉನ್ನತ ಶಿಕ್ಷಣ ಹಂತದಲ್ಲಿ ಆಂಗ್ಲಭಾಷಾ ಜ್ಞಾನ ಅವಶ್ಯವಾಗಿರುವುದರಿಂದ ಆಂಗ್ಲ ಭಾಷೆಯನ್ನು ಒಂದು ವಿಷಯವಾಗಿ ಅಧ್ಯಯನ ಮಾಡದೇ ಮಾಧ್ಯಮವಾಗಿ ಕಲಿಯುತ್ತಿರುವುದರಿಂದ ಕನ್ನಡ ಕ್ಷೀಣಿಸುತ್ತಿದೆ ಅಲ್ಲಿಯೇ ನಾವು ಎಡವುತ್ತಿದ್ದೇವೆ ಎಂದರು.

ತಾವು ಕನ್ನಡ ಶಾಲೆಯಲ್ಲಿ ಕಲಿತು ಕನ್ನಡ ಮಾಧ್ಯಮದಲ್ಲಿಯೇ ಕೆಎಎಸ್ ಪಾಸ್ ಮಾಡಿದ್ದೇವೆ. ಸವಣೂರಿನ ಹೆಮ್ಮೆಯ ಪುತ್ರ ಡಾ.ವಿಕೃ ಗೋಕಾಕ ಅವರು ಭಾರತ ಸಿಂಧೂ ರಶ್ಮಿ ಎಂಬ ಮಹಾಗ್ರಂಥ ಬರೆದು ಜ್ಞಾನ ಪೀಠ ಪ್ರಶಸ್ತಿ ಪಡೆದು ನಾಡಿನ ಗರಿಮೆ ಹೆಚ್ಚಿಸಿ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಎಲ್ಲ ಪಾಲಕರು ಮಕ್ಕಳಿಗೆ ಇಂಗ್ಲೀಷ್ ಭಾಷೆಯನ್ನು ವಿಷಯವಾಗಿ ಕಲಿಸಿ ಮಾಧ್ಯಮವಾಗಿ ಅಲ್ಲ ಆಂಗ್ಲ ಭಾಷೆ ವ್ಯಾಮೋಹಕ್ಕೊಳಗಾಗಿ ನಮ್ಮ ಕನ್ನಡತನವನ್ನು ಮಾರಬೇಡಿ ಎಂದ ಅವರು, ಪ್ರತಿಯೊಬ್ಬರು ಕನ್ನಡ ನಾಡನ್ನು ಕಟ್ಟುವುದರೊಂದಿಗೆ, ಕನ್ನಡ ಭಾಷೆ, ನೆಲ,ಜಲವನ್ನು ಉಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಕರೆ ನೀಡಿದರು.

ಜೋತಿ ಬೆಳಗುವುದರ ಮೂಲಕ ಸಮಾರಂಭವನ್ನು ಉದ್ಘಾಟಿಸಿದ ಪಿ.ಎಸ್.ಐ ಹನುಂತಪ್ಪ ಶಿವಣ್ಣವರ, ಕನ್ನಡ ಭಾಷೆ ನಮ್ಮ ರಾಜ್ಯದಲ್ಲಿ ಕ್ಷೀಣಿಸತೊಡಗಿದ್ದು, ಕನ್ನಡ ಭಾಷೆಯ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಿ, ಕನ್ನಡವನ್ನು ಉಳಿಸಿ ಬೆಳಸಲು ಸಂಘಟನಾತ್ಮಕ ಶಕ್ತಿ ಅವಶ್ಯವಾಗಿದೆ ಎಂದರು.

ಹಿರಿಯ ಮುಖಂಡ, ವಿದ್ಯಾಭಾರತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮೋಹನ ಮೆಣಸಿನಕಾಯಿ ಮಾತನಾಡಿ ಆಂಗ್ಲ ಭಾಷೆಯ ಪ್ರಭಾವದಿಂದ ಎರಡೂವರೆ ಸಾವಿರ ವರ್ಷಕ್ಕಿಂತ ಪುರಾತನ ಕನ್ನಡ ಭಾಷೆ ಕ್ಷೀಣಿಸುತ್ತಿದೆ. ಕನ್ನಡಿಗರು ನೇಪಾಳ, ಗೋವಾ ತಮಿಳನಾಡು ಸೇರಿದಂತೆ ಅನೇಕ ರಾಜ್ಯಗಳನ್ನು ಆಳಿದ ಇತಿಹಾಸವಿದೆ. ಆದರೆ ನಾವು ಕನ್ನಡ ನಾಡು, ನುಡಿ, ಭಾಷೆ, ನೆಲ,ಜಲದ ಉಳಿವಿಗಾಗಿ ಹೋರಾಡುತ್ತಿದ್ದೇವೆಂದರೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದರು.

ಸಮಾರಂಭದಲ್ಲಿ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮುನಿಯಪ್ಪ.ಪಿ, ಹಿರಿಯ ಮುಖಂಡ ಮೋಹನ ಮೆಣಸಿನಕಾಯಿ, ಮಲ್ಲಾರಪ್ಪ ತಳ್ಳಿಹಳ್ಳಿ, ಈಶ್ವರಿ ವಿಶ್ವ ವಿದ್ಯಾಲಯದ ಬೃಹ್ಮಕುಮಾರಿ ಕಮಲಾ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚನ್ನಬಸಪ್ಪ ಬೆಂಡಿಗೇರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಕ್ಷಣಾ ಸಮಿತಿ ರಾಜ್ಯ ರೈತಘಟಕದ ಅಧ್ಯಕ್ಷ ತುಕಾರಾಮ ಎಂ.ಡಿ, ಜಿಲ್ಲಾ ರೈತಘಟಕದ ಅಧ್ಯಕ್ಷ ಶಿದ್ಲಿಂಗಪ್ಪ ಶೀಲವಂತರ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಕೃಷ್ಣಾ ಹಂಚಾಟೆ, ರಾಜ್ಯ ರೈತ ಘಟಕದ ಸಂಘಟನಾ ಕಾರ್ಯದರ್ಶಿ ಸಂಘಮೇಶ ಕೋತಂಬರಿ, ತಾಲೂಕಾಧ್ಯಕ್ಷ ಮಾರುತಿ ರಾಶಿನಕರ ಪದಾಧಿಕಾರಿಗಳಾದ ರಮೇಶ ಹುನಗುಂದ, ಒಂಪ್ರಸಾದ್, ಶಿವಪ್ಪ ಅಂಗಡಿ, ಹನುಮಂತಪ್ಪ ಹರಿಜನ, ಬಸವರಾಜ ಗೋಕಾವಿ, ಚನ್ನಬಸಪ್ಪ ವಡವಿ , ಮಂಜುನಾಥ ಇದ್ಲಿ,ಸೇರಿದಂತ ತಾಲೂಕಿನ ಗ್ರಾಮ ಘಟಕದ ಪದಾಧಿಕಾರಿಗಳು, ಅಭಿಮಾನಿಗಳು ಇದ್ದರು. ಡಾ. ವಿರೇಶ ಹಿತ್ತಲಮನಿ ನಿರ್ವಹಿಸಿದರು.