ತಾಯಿ ಮನೆಯಿಂದ ಓಡಿಸಿದ್ದಾರೆ

ಬೆಂಗಳೂರು,ಏ.೧೮:ಮೈಸೂರಿನ ಕೃಷ್ಣರಾಜ ಕ್ಷೇತ್ರದ ಟಿಕೆಟ್ ಕೈತಪ್ಪಿರುವುದಕ್ಕೆ ಹಾಲಿ ಶಾಸಕ ಎಸ್.ಎ. ರಾಮ್‌ದಾಸ್ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದು, ೩೦ ವರ್ಷದಿಂದ ಇದ್ದ ತಾಯಿ ಮನೆಯಿಂದ ಓಡಿಸಿದ್ದಾರೆ. ಈಗ ಆ ಮನೆಯಲ್ಲಿ ಇರಬೇಕಾ ಬೇಡವಾ ಎಂಬ ಬಗ್ಗೆ ಯೋಚಿಸುವಂತಾಗಿದೆ ಎಂದಿದ್ದಾರೆ.
ಚುನಾವಣಾ ಟಿಕೆಟ್ ಕೈತಪ್ಪಿರುವುದರಿಂದ ಅಸಮಾಧಾನಗೊಂಡಿರುವ ರಾಮ್‌ದಾಸ್ ಬಂಡಾಯ ಸ್ಪರ್ಧೆಯ ಸುಳಿವು ನೀಡಿದ್ದು, ತಮ್ಮ ಬೆಂಬಲಿಗರ ಜತೆ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ೩೦ ವರ್ಷದಿಂದ ಇದ್ದ ತಾಯಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಬಿಜೆಪಿ ಟಿಕೆಟ್ ಪಡೆದಿರುವ ಶ್ರೀವತ್ಸಾ ಹಾಗೂ ಸಂಸದ ಪ್ರತಾಪ್‌ಸಿಂಹರವರು ರಾಮ್‌ದಾಸ್‌ರವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ಬಂದರಾದರೂ ರಾಮ್‌ದಾಸ್ ಇವರಿಬ್ಬರನ್ನು ಭೇಟಿ ಮಾಡಲಿಲ್ಲ. ನಾನು ಯಾರೊಂದಿಗೂ ಮಾತನಾಡುವುದಿಲ್ಲ ಎಂದು ಹೇಳಿ ಇಬ್ಬರನ್ನು ವಾಪಸ್ ಕಳುಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಪ್ರತಾಪ ಸಿಂಹ ರಾಮ್‌ದಾಸ್‌ರವರ ಆರ್ಶೀವಾದ ಪಡೆಯಲು ನಾನು ಶ್ರೀವತ್ಸಾ ಬಂದಿದ್ದೆವು. ಟಿಕೆಟ್ ಕೈತಪ್ಪಿರುವ ಕಾರಣ ರಾಮ್‌ದಾಸ್‌ರವರಿಗೆ ನೋವು ಬೇಸರವಾಗಿರುವುದು ಸಹಜ, ರಾಮ್‌ದಾಸ್ ಪಕ್ಷವನ್ನು ತಾಯಿ ಎಂದು ಭಾವಿಸಿದ್ದಾರೆ. ಅವರು ತಾಯಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂಬುದು ತಮ್ಮ ಭಾವನೆ ಎಂದರು.