ತಾಯಿ ಮತ್ತು ಮಕ್ಕಳ ಆಸ್ಪತ್ರೆ ಅಧಿಕೃತವಾಗಿ ಸರ್ಕಾರದ ವಶಕ್ಕೆ

ಉಡುಪಿ, ಮೇ ೬- ನಗರದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ರಾಜ್ಯ ಸರಕಾರ ತನ್ನ ವಶಕ್ಕೆ ಪಡೆದು ಅಧಿಕೃತ ಸರಕಾರಿ ಆದೇಶವನ್ನು ಹೊರಡಿಸಿದೆ.
ಸಚಿವ ಸಂಪುಟ ಸಭೆಯ ನಿರ್ಣಯದಂತೆ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉಡುಪಿ ಇದರ ನಿರ್ವಹಣೆಯನ್ನು ಸರಕಾರದ ಸುಪರ್ದಿಗೆ ಪಡೆದು ಅಧಿಕೃತ ಸರಕಾರಿ ಆದೇಶ ಹೊರಬಿದ್ದಿದೆ. ಇದರೊಂದಿಗೆ ಉಡುಪಿ ಜಿಲ್ಲೆ ಕಸಬಾ ತಾಲೂಕಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿರುವ ಸುಮಾರು ೪ ಎಕರೆ ಜಮೀನನ್ನು ಸಹ ಸರಕಾರ ತನ್ನ ವಶಕ್ಕೆ ಪಡೆದುಕೊಂಡಿದೆ. ಅಲ್ಲದೇ ಆಸ್ಪತ್ರೆಯ ಕಟ್ಟಡದ ಸಂಪೂರ್ಣ ನಿರ್ವಹಣೆ ಹಾಗೂ ಇತರ ಜವಾಬ್ದಾರಿಗಳನ್ನು ಸರಕಾರವೇ ವಹಿಸಿಕೊಂಡಿದೆ. ಈ ಆಸ್ಪತ್ರೆಯ ವಾರ್ಷಿಕ ನಿರ್ವಹಣಾ ವೆಚ್ಚ ೭ ಕೋಟಿ ರೂ. ಹಾಗೂ ಅವಶ್ಯವಿರುವ ಮಾನವ ಸಂಪನ್ಮೂಲಗಳಿಗೆ ಅವರ್ತಕ ವೆಚ್ಚವಾಗಿ ವಾರ್ಷಿಕ ೨.೮೩ ಕೋಟಿ ರೂ. ಸೇರಿದಂತೆ ಒಟ್ಟು ೯.೮೩ ಕೋಟಿ ರೂ.ಗಳ ಅನುದಾನವನ್ನು ರಾಜ್ಯ ವಲಯದಿಂದ ಭರಿಸುವುದು ಹಾಗೂ ೨೦೦ ಹಾಸಿಗೆಗಳ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅವಶ್ಯವಿರುವ ಹುದ್ದೆಗಳನ್ನು ಸರಕಾರದ ವತಿಯಿಂದ ಭರ್ತಿ ಮಾಡುವ ಬಗ್ಗೆ ಸರಕಾರ ಆದೇಶದಲ್ಲಿ ಸಹಮತಿಯನ್ನು ವ್ಯಕ್ತಪಡಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿರುವ ಸುಮಾರು ೪ ಎಕರೆ ಜಮೀನಿನಲ್ಲಿ ೨೦೦ ಹಾಸಿಗೆಗಳ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು, ೪೦೦ ಹಾಸಿಗೆಗಳ ಸೆಂಟರ್ ಆಫ್ ಎಕ್ಸಲೆನ್ಸ್ ಆಸ್ಪತ್ರೆ ಹಾಗೂ ಆರೋಗ್ಯ ಸೌಲಭ್ಯಗಳನ್ನೊಳಗೊಂಡ ಕೇಂದ್ರವನ್ನು ನಿರ್ವಹಿಸಲು ಬಿಆರ್‌ಎಸ್ ಹೆಲ್ತ್ ರಿಸರ್ಚ್ ಇನ್‌ಸ್ಟಿಟ್ಯೂಷನ್ ಪ್ರೈವೆಟ್ ಲಿಮಿಟೆಡ್ ಬೆಂಗಳೂರು ಇವರಿಗೆ ೩೦ ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನಿರ್ವಹಿಸಲು ಕೆಲವೊಂದು ಷರತ್ತುಗಳನ್ನು ಒಳಪಟ್ಟು ಸರಕಾರ ಅನುಮೋದನೆ ನೀಡಿತ್ತು. ಆರ್ಥಿಕ ಮುಗ್ಗಟ್ಟಿನಿಂದ ಬಿ.ಆರ್.ಎಸ್.ಸಂಸ್ಥೆ ಆಸ್ಪತ್ರೆಯ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಲು ವಿಫಲವಾದ ಬಳಿಕ ಶಾಸಕ ಕೆ. ರಘುಪತಿ ಭಟ್ ಅವರು ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನಿರ್ವಹಣೆಯನ್ನು ಸರಕಾರದ ಸುಪರ್ದಿಗೆ ಪಡೆಯುವಂತೆ ಇಲಾಖೆ ಮಟ್ಟದಲ್ಲಿ ನಿರಂತರವಾಗಿ ಪ್ರಯತ್ನಿಸಿದ್ದರು. ಅವರು ವಿಧಾನಸಭಾ ಅಧಿವೇಶನದಲ್ಲೂ ಈ ವಿಷಯ ಪ್ರಸ್ತಾಪಿಸಿದ್ದರು. ಕಳೆದ ಮಾ.೩೦ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಆಸ್ಪತ್ರೆಯ ನಿರ್ವಹಣೆಯನ್ನು ಸರಕಾರಕ್ಕೆ ಹಸ್ತಾಂತರ ಮಾಡಿ ನಿರ್ಣಯ ಕೈಗೊಳ್ಳಲಾಗಿತ್ತು. ಬಿ.ಆರ್.ಶೆಟ್ಟಿ ಸಂಸ್ಥೆಯು ೨೦೨೧ರ ಜೂ.೯ರಂದು ಸರಕಾರಕ್ಕೆ ಪತ್ರವೊಂದನ್ನು ಬರೆದು ಆಸ್ಪತ್ರೆಯ ನಿರ್ವಹಣೆ, ಮೇಲ್ವಿಚಾರಣೆ ಹಾಗೂ ಇತರ ಎಲ್ಲಾ ಸೇವೆ ಗಳಿಂದ ನಿರ್ಗಮಿಸಲು ಅನುಮತಿ ನೀಡುವಂತೆ, ಪ್ರಸ್ತುತ ಆಸ್ಪತ್ರೆಯಲ್ಲಿ ಸೇವೆ ಸಲಿಸುತ್ತಿರುವ ಸಿಬ್ಬಂದಿಯನ್ನು ಸರಕಾರಿ ಆಯೋಜನೆಯಲ್ಲಿ ಮುಂದುವರಿಸುವಂತೆ ಹಾಗೂ ಆಸ್ಪತ್ರೆಗೆ ಪ್ರಸ್ತುತ ಇರುವ ಹೆಸರನ್ನೇ ಮುಂದುವರಿಸುವಂತೆ ಮನವಿ ಸಲ್ಲಿಸಿತ್ತು ಎಂದು ತಿಳಿದುಬಂದಿದೆ.