ತಾಯಿ-ಮಗಳ ಹತ್ಯೆ ಆರೋಪ ಸಾಬೀತು

ಲಂಡನ್, ಆ.೫- ಕಾರ್ ಡಿಕ್ಕಿ ಹೊಡೆಸಿ ಇಬ್ಬರನ್ನು ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಕ್‌ಟಾಕ್ ಸ್ಟಾರ್ ಹಾಗೂ ಆಕೆಯ ತಾಯಿ ಅಪರಾಧಿ ಎಂದು ಲೀಸೆಸ್ಟರ್ ಕ್ರೌನ್ ನ್ಯಾಯಾಲಯ ತೀರ್ಪು ನೀಡಿದೆ. ಅಕ್ರಮ ಸಂಬಂಧದ ಬಗೆಗಿನ ವಿಚಾರವನ್ನು ಬಯಲು ಮಾಡುವುದಾಗಿ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಇಬ್ಬರನ್ನು ಹತ್ಯೆ ಮಾಡಿರುವ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಸ್ಟೋಕ್-ಆನ್-ಟ್ರೆಂಟ್‌ನ ಟನ್‌ಸ್ಟಾಲ್ ಮೂಲದ ಟಿಕ್‌ಟಾಕ್ ಸ್ಟಾರ್ ಮಾಹೆಕ್ ಬುಖಾರಿ (೨೪) ಮತ್ತು ಆಕೆಯ ತಾಯಿ ಅನ್ಸ್ರೀನ್ ಬುಖಾರಿ (೪೬) ಪ್ರಕರಣದ ಅಪರಾಧಿಗಳು.
ಅಲ್ಲದೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೇಖಾನ್ ಕರ್ವಾನ್ ಮತ್ತು ರಯೀಸ್ ಜಮಾಲ್ ಕೂಡ ಅಪರಾಧಿಗಳು ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಆದರೆ ಬರ್ಮಿಂಗ್‌ಹ್ಯಾಮ್‌ನ ನತಾಶಾ ಅಖ್ತರ್ (೨೩) ಲೀಸೆಸ್ಟರ್‌ನ ಅಮೀರ್ ಜಮಾಲ್ (೨೮) ಮತ್ತು ಸನಾಫ್ ಗುಲಾಮುಸ್ತಫಾ (೨೩) ಕೊಲೆ ಆರೋಪದಿಂದ ಮುಕ್ತಗೊಳಿಸಲಾಗಿದ್ದರೂ ನರಹತ್ಯೆಗೆ ಶಿಕ್ಷೆ ವಿಧಿಸಲಾಗಿದೆ. ಲೀಸೆಸ್ಟರ್‌ನ ಮುಹಮ್ಮದ್ ಪಟೇಲ್ (೨೧) ಪ್ರಕರಣದಿಂದ ಪಾರಾಗಿದ್ದಾರೆ. ೨೦೨೨ರ ಫೆಬ್ರವರಿಯಲ್ಲಿ ಇಂಗ್ಲೆಂಡ್‌ನ ಲೀಸೆಸ್ಟರ್ ಬಳಿ ನಡೆದ ಅಪಘಾತದಲ್ಲಿ ಆಕ್ಸಫರ್ಡ್‌ಶೈರ್‌ನ ಸಾಕಿಬ್ ಹುಸೇನ್ (೨೧) ಹಾಗೂ ಹಾಶಿಮ್ ಇಜಾಜುದ್ದೀನ್ (೨೧) ಎಂಬಿಬ್ಬರು ಮೃತಪಟ್ಟಿದ್ದರು. ಮಾಹೆಕ್ ಬುಖಾರಿ ಜೊತೆ ಸಾಕಿಬ್ ಹಲವು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದು, ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ಆತನ ಬಳಿ ಬುಖಾರಿಯನ್ನು ಲೈಂಗಿಕವಾಗಿ ಬಳಸಿದ ವಸ್ತುಗಳಿದ್ದವು ಎನ್ನಲಾಗಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಬುಖಾರಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಹತ್ಯೆ ದಿನದಂದು ಬುಖಾರಿಯನ್ನು ಭೇಟಿ ಮಾಡುವ ಸಲುವಾಗಿ ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹಿಂದಿನಿಂದ ಚೇಸ್ ಮಾಡಿಕೊಂಡು ಬಂದ ಎರಡು ಕಾರ್‌ಗಳು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದವು. ಈ ವೇಳೆ ಗಂಭೀರ ಗಾಯಗೊಂಡು ಸಾವು-ಬದುಕಿನ ಸ್ಥಿತಿಯಲ್ಲಿದ್ದ ಸಾಕಿಬ್ ಹುಸೇನ್ ಸೀಟ್‌ನಲ್ಲೇ ಕುಳಿತುಕೊಂಡು ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದ. ಆದರೆ ಗಂಭೀರ ಗಾಯಗೊಂಡಿದ್ದ ಇಬ್ಬರೂ ಮೃತಪಟ್ಟಿದ್ದರು. ಸದ್ಯ ಹೆಚ್ಚಿನ ವಿಚಾರಣೆಯಿಂದ ಹಲವು ವಿಚಾರಗಳು ಬೆಳಕಿಗೆ ಬಂದು, ಸದ್ಯ ಕೋರ್ಟ್ ತೀರ್ಪು ನೀಡಿದೆ.