ತಾಯಿ-ಮಗಳು ಒಂದೇ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ

ಬೆಳಗಾವಿ,ಜು.10-ಕೌಟುಂಬಿಕ‌ ಕಲಹದಿಂದ ಬೆಸತ್ತು ದೇಶಕ್ಕಾಗಿ ಪ್ರಾಣ ತೆತ್ತ ಯೋಧನ ಪತ್ನಿ ಹೆತ್ತ ಮಗಳೊಂದಿಗೆ ಒಂದೇ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಕಿತ್ತೂರು ತಾಲೂಕಿನ ದಿಂಡಲಕೊಪ್ಪ ಗ್ರಾಮದಲ್ಲಿ ನಡೆದಿದೆ.
ದಿಂಡಲಕೊಪ್ಪ ಗ್ರಾಮದ ಯೋಧನ ಪತ್ನಿ ಮಹಾದೇವಿ ಇಂಚಲ (34) ಹಾಗೂ ಚಾಂದನಿ ಇಂಚಲ (7) ಆತ್ಮಹತ್ಯೆಗೆ ಶರಣಾದ ಮೃತ ದುರ್ದೈವಿಗಳು ಆಗಿದ್ದಾರೆ. ಗೋಕಾಕ ತಾಲೂಕಿನ ಖನಗಾಂವ ಗ್ರಾಮದ ಯೋಧನ ಜೊತೆಗೆ ಮಹಾದೇವಿ ವಿವಾಹವಾಗಿದ್ದಳು. ಆದರೆ, ಮದುವೆಯಾಗಿ ಎರಡು ವರ್ಷಕ್ಕೆ ಗಂಡ ಸೈನಿಕನಾಗಿ ಸೇವೆ ಸಲ್ಲಿಸುವಾಗಲೇ ಪ್ರಾಣತ್ಯಾಗ ಮಾಡಿದ್ದಾರೆ.  ಪತಿಯನ್ನು ಕಳೆದುಕೊಂಡ ನಂತರ ದಿಂಡಲಕೊಪ್ಪದಲ್ಲಿರುವ ತವರು ಮನೆಯಲ್ಲಿ ಪುತ್ರಿಯೊಂದಿಗೆ ಮಹಿಳೆ ವಾಸವಾಗಿದ್ದಳು. ಪತಿ ಮೃತಪಟ್ಟು 7 ವರ್ಷಗಳಾದರೂ ಮನೆಯನ್ನು ಬಿಟ್ಟು ಬೇರೆಡೆ ಹೋಗಿ ಜೀವನ ಮಾಡಲು ಬಿಡದೇ ಯೋಧನ ಪತ್ನಿಗೆ ತವರು ಮನೆಯವರು ನಿರ್ಬಂಧ ವಿಧಿಸಿದ್ದಾರೆ. ಮನೆಯಲ್ಲಿ ಸಹೋದರ ಹಾಗೂ ನಾದಿನಿಯ ಕಿರುಕುಳಕ್ಕೆ ಬೇಸತ್ತು ಸೋಮವಾರ ಮಧ್ಯಾಹ್ನದ ವೇಳೆ ಪುತ್ರಿಯ ಜೊತೆಗೆ ಮಹಾದೇವಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಬೆಳಗಾವಿಯ ಕಿತ್ತೂರು ‌ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.
ಯೋಧನ ಪತ್ನಿ ಮಹಾದೇವಿ ಅವರು ಗಂಡ ತೀರಿಕೊಂಡ ನಂತರ ಪ್ರತ್ಯೇಕವಾಗಿ ದುಡಿದು ವಾಸ ಮಾಡುತ್ತೇನೆ. ಮಗಳನ್ನು ಚೆನ್ನಾಗಿ ಓದಿಸಿ ನೌಕರಿ ಕೊಡಿಸುತ್ತೇನೆ ಎಂದು ಎಷ್ಟು ಬೇಡಿಕೊಂಡರೂ ಪ್ರತ್ಯೇಕವಾಗಿ ವಾಸ ಮಾಡಲು ಸ್ವತಃ ಸಹೋದರ ಮತ್ತು ಗಂಡನ ತಂಗಿ ನಾದಿನಿ ವಿರೋಧ ಮಾಡಿದ್ದಾರೆ. ಇದರಿಂದ ನೆಮ್ಮದಿಯಾಗಿ ಜೀವನ ಮಾಡಲು ಬಿಡದೇ, ಮಗಳಿಗೆ ಉತ್ತಮ ಭವಿಷ್ಯ ರೂಪಿಸಿಕೊಡಲು ಇವರು ಅಡ್ಡಿಯಾಗುತ್ತಿದ್ದಾರೆ ಎಂದು ಭಾವಿಸಿ, ಮೆನಯವರ ಕಿರುಕುಳಕ್ಕೆ ಬೇಸತ್ತು ಮಗಳೊಂದಿಗೆ ನೇಣು ಬಿಗಿದುಕೊಂಡಿದ್ದಾಳೆ. ಪತಿ ಯೋಧನಾಗಿ ದೇಶಕ್ಕಾಗಿ ಪ್ರಾಣ ಬಿಟ್ಟರೆ, ಆತನ ಪತ್ನಿ- ಮಗಳಿಗೆ ಮನೆಯಲ್ಲಿಯೇ ರಕ್ಷಣೆ ಸಿಗದೇ ಸಾವನ್ನಪ್ಪಿದ್ದಾಳೆ.