ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರಿಗೆ ಸನ್ಮಾನ

ಬೀದರ:ಜೂ.2: ಕೋವಿಡ್ ಸೋಂಕಿತರಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುತ್ತಿರುವ ಪ್ರಯುಕ್ತ ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ ಹಾಗೂ ಬಸವಲಿಂಗ ಶಿವಾಚಾರ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಇಲ್ಲಿಯ ನೂರು ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ವೈದ್ಯರನ್ನು ಸನ್ಮಾನಿಸಲಾಯಿತು.

ಆಡಳಿತ ವೈದ್ಯಾಧಿಕಾರಿ ಡಾ. ಸೋಹೆಲ್, ಡಾ. ಸರೋಜಾ ಪಾಟೀಲ, ಡಾ. ನಾಗರಾಜ ಚಾಕೋತೆ, ಡಾ. ಅಂಬಾದಾಸ, ಡಾ. ವೆಂಕಟ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕೋವಿಡ್ ಸೋಂಕಿನ ವೇಳೆ ಬಡವರಿಗೆ ಸರ್ಕಾರಿ ಆಸ್ಪತ್ರೆಗಳೇ ಆಸರೆಯಾಗಿವೆ ಎಂದು ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿಯ ಹುಗ್ಗೆಳ್ಳಿ ಮಠದ ಬಸವಲಿಂಗ ದೇವರು ನುಡಿದರು.

ಕೋವಿಡ್ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಬಹಳಷ್ಟು ಸಾವು, ನೋವುಗಳಿಗೆ ಕಾರಣವಾಗಿದೆ.
ಇಂತಹ ಕಠಿಣ ಸಂದರ್ಭದಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಪ್ರಾಣದ ಹಂಗು ತೊರೆದು ಸೋಂಕಿತರಿಗೆ ಉತ್ತಮ ಚಿಕಿತ್ಸೆ ಕೊಡುತ್ತಿದ್ದಾರೆ. ಜನರ ಜೀವ ಉಳಿಸುತ್ತಿದ್ದಾರೆ ಎಂದು ಹೇಳಿದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸ್ವಚ್ಛತೆ ಇದೆ. ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುವ ಸಿಬ್ಬಂದಿ ಇದ್ದಾರೆ. ಅಂತೆಯೇ ಬಹಳಷ್ಟು ಮಂದಿ ಈ ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಾರೆ ಎಂದು ತಿಳಿಸಿದರು.

ವೈದ್ಯರನ್ನು ದೇವರಿಗೆ ಹೋಲಿಸಲಾಗಿದೆ. ಹೀಗಾಗಿ ವೈದ್ಯರು ತಮ್ಮ ವೃತ್ತಿ ಗೌರವವನ್ನು ಕಾಪಾಡಿಕೊಂಡು ಹೋಗಬೇಕು. ಮಾನವೀಯ ನೆಲೆಯಲ್ಲಿ ಸೋಂಕಿತರು, ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು ಎಂದು ಹೇಳಿದರು.

ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ ಕೋವಿಡ್‍ನಿಂದ ತೊಂದರೆಗೊಳಗಾದ ಬಡವರು, ನಿರ್ಗತಿಕರಿಗೆ ಆಹಾರ ಕಿಟ್, ಮಾಸ್ಕ್, ಸ್ಯಾನಿಟೈಸರ್, ರೈತರಿಗೆ ಉಚಿತ ಬೀಜ ಹಾಗೂ ರಸಗೊಬ್ಬರ ವಿತರಿಸುವ ಮೂಲಕ ನೆರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆಯ ಕಾರ್ಯದರ್ಶಿ ಬಸಯ್ಯ ಸ್ವಾಮಿ, ಡಾ. ಕಲ್ಯಾಣರಾವ್ ಮಜಗೆ ಇದ್ದರು.