
ಚಾಮರಾಜನಗರ,ಸೆ.೧೫- ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳು ಜೊತೆ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು,ಕೊಲೆ ಶಂಕೆ ವ್ಯಕ್ತವಾಗಿದೆ.
ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳು ಜೊತೆ ಮಲಗಿರುವ ಸ್ಥಿತಿಯಲ್ಲಿ ಎಲ್ಲರ ಶವ ಪತ್ತೆಯಾಗಿರುವ ಬೆನ್ನಲ್ಲೇ ಆಕೆಯ ಪತಿ ಹಾಗೂ ಆತನ ಪೋಷಕರು ನಾಪತ್ತೆಯಾಗಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ ಮೇಘಾ (೨೪), ಪುನ್ವಿತಾ (೬), ಮನ್ವಿತಾ (೩) ಮೃತರು. ಮೂವರನ್ನೂ ಗಂಡನೇ ನೇಣು ಬಿಗಿದು ಗಂಡನೇ ಹತ್ಯೆಗೈದಿದ್ದಾನೆ ಎಂದು ಮೇಘಾ ಅವರ ಹೆತ್ತವರು ಆರೋಪಿಸಿದ್ದಾರೆ. ಅಭಿ ಮೃತ ಮೇಘಾ ಅವರ ಪತಿ. ಮೇಘಾ ಮತ್ತು ಅಭಿ ಮದುವೆಯಾಗಿ ಎಂಟು ವರ್ಷವಾಗಿದೆ. ಈತ ಆರಂಭದಿಂದಲೂ ಮೇಘಾಗೆ ಚಿತ್ರಹಿಂಸೆ ನೀಡುತ್ತಿದ್ದ. ನಿನ್ನೆ ಗಲಾಟೆ ಮಾಡಿ ಮೂವರನ್ನು ನೇಣು ಹಾಕಿ ಕೊಲೆಗೈದಿದ್ದಾನೆ ಎಂದು ಮೇಘ ತಂದೆ ಮಹೇಶ್ ಆರೋಪಿಸಿದ್ದಾರೆ.
ಅಭಿ ಸೇರಿದಂತೆ ಆತನ ತಂದೆ ಹಾಗೂ ತಾಯಿ ನಾಪತ್ತೆಯಾಗಿದ್ದಾರೆ. ಸ್ಥಳಕ್ಕೆ ತೆರಕಣಾಂಬಿ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.