ತಾಯಿ ಕೊಂದು ಸೂಟ್‌ಕೇಸ್‌ನಲ್ಲಿ ಶವತಂದ ಕಟುಕಿ

ಬೆಂಗಳೂರು, ಜೂ.೧೩-ತಾಯಿಯೇ ದೇವರು,ತಾಯಿಗಿಂತ ದೇವರಿಲ್ಲ ಎನ್ನುವ ನಾಣ್ಣುಡಿಯನ್ನು ಸುಳ್ಳು ಮಾಡುವಂತೆ ಕಟುಕಿಯೊಬ್ಬಳು ಹೆತ್ತ ತಾಯಿಯನ್ನು ಕೊಲೆಗೈದು ಸೂಟ್ ಕೇಸ್‌ನಲ್ಲಿ ಶವ ತುಂಬಿಕೊಂಡು ನೇರವಾಗಿ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಅಘಾತಕಾರಿ ಘಟನೆ ನಿನ್ನೆ ಮಧ್ಯರಾತ್ರಿ ನಡೆದಿದೆ.ಬೀವಾ ಪಾಲ್ (೭೦) ಮಗಳಿಂದಲೇ ಕೊಲೆಯಾದ ದುರ್ದೈವಿ,ಪಶ್ಚಿಮ ಬಂಗಾಳ ಮೂಲದ ಸೆನಾ ಸೇನ್ (೩೯) ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಪಾಪಿ ಮಗಳಾಗಿದ್ದು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ಸಿಕೆ ಬಾಬಾ ಅವರು ತಿಳಿಸಿದ್ದಾರೆ.ಪ್ರತಿನಿತ್ಯ ಅತ್ತೆಯೊಂದಿಗೆ ಜಗಳ ಮಾಡುತ್ತಿದ್ದ ಹೆತ್ತು ಹೊತ್ತ ತಾಯಿಗೆ ೨೦ಕ್ಕೂ ಅಧಿಕ ನಿದ್ರೆ ಮಾತ್ರೆಗಳನ್ನು ಕೊಟ್ಟು ಕೊಲೆ ಮಾಡಿ ಶವವನ್ನು ಸೂಟ್‌ಕೇಸ್‌ನಲ್ಲಿ ಇಟ್ಟುಕೊಂಡು ಪೊಲೀಸ್ ಠಾಣೆಗೆ ಆಗಮಿಸಿ ಸಿಬ್ಬಂದಿಯನ್ನು ದಂಗು ಬಡಿಸಿದ್ದಾಳೆ.ಮೂಲತಃ ಕೋಲ್ಕತ್ತಾದ ಸರ್ಕಾರಿ ಇಲಾಖೆಯ ಕ್ಲರ್ಕ್ ಹಾಗೂ ಮೃತ ತಾಯಿಗೆ ಒಬ್ಬಳೇ ಮಗಳಾದ ಸೋನಾಲಿ ಫಿಸಿಯೋಥೆರಫಿಸ್ಟ್ ಆಗಿದ್ದು ಕುಟುಂಬದವರ ನಿಶ್ಚಯದಂತೆ ಅಸ್ಸಾಂ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಸುಬ್ರತ್ ಸೇನ್ ಜೊತೆ ೧೦ ವರ್ಷಗಳ ಹಿಂದೆ ವಿವಾಹವಾಗಿದ್ದಳು. ಇವರ ಕುಟುಂಬವು ಬಿಳೇಕಹಳ್ಳಿಯಲ್ಲಿ ಎಸ್‌ಎಸ್‌ಆರ್ ಗ್ರೀನ್ ಅಪಾರ್ಟ್‌ಮೆಂಟ್‌ನಲ್ಲಿ ಸ್ವಂತ ಫ್ಲ್ಯಾಟ್ ಹೊಂದಿದ್ದು, ಇದರಲ್ಲಿ ಅತ್ತೆ-ಮಾವ, ಗಂಡ-ಹೆಂಡತಿ ಹಾಗೂ ಮಗ ಸುಖವಾಗಿ ಸಂಸಾರ ಸಾಗುತ್ತಿತ್ತು.
ಅಮ್ಮ ಬಂದಿದ್ದೇ ತಪ್ಪಾಯ್ತು:
ಕೋಲ್ಕತ್ತಾದಲ್ಲಿ ಕ್ಲರ್ಕ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಸೋನಾಲಿ ತಂದೆ ೨೦೧೮ರಲ್ಲಿ ವಯೋಸಹಜವಾಗಿ ತೀರಿಕೊಂಡ ಹಿನ್ನೆಲೆಯಲ್ಲಿ ವೃದ್ಧ ಒಬ್ಬಂಟಿ ತಾಯಿ ಹಾಗೂ ತಮ್ಮನನ್ನು ತನ್ನ ಬೆಂಗಳೂರಿನ ಮನೆಗೆ ಕರೆದುಕೊಂಡು ಬಂದು ಇಟ್ಟುಕೊಂಡಿದ್ದಳು. ಆದರೆ, ಇಲ್ಲಿಂದಲೇ ಸಂಸಾರದಲ್ಲಿ ದೊಡ್ಡ ಬಿರುಗಾಳಿಯೇ ಆರಂಭವಾಗಿತ್ತು.
ಇಲ್ಲಿ ಅತ್ತೆ- ಸೊಸೆ ಚೆನ್ನಾಗಿದ್ದರೂ, ಅತ್ತೆ ಹಾಗೂ ಅಮ್ಮನ ನಡುವೆ ನಿರಂತರವಾಗಿ ಜಗಳ ನಡೆಯುತ್ತಲೇ ಬಂದಿತ್ತು. ಇದರಿಂದ ತೀವ್ರ ಮನೆಯ ಎಲ್ಲ ಸದಸ್ಯರೂ ಕೂಡ ತೀವ್ರವಾಗಿ ರೋಸಿ ಹೋಗಿದ್ದರು. ಮನೆಯಲ್ಲಿ ಅತ್ತೆ- ಅಮ್ಮನ ನಡುವೆ ನಡೆಯುತ್ತಿದ್ದ ಜಗಳದ ಕಾರಣದಿಂದ ಫಿಸಿಯೋಥೆರಪಿಸ್ಟ್ ಕೆಲಸ ಮಾಡುತ್ತಿದ್ದ ಸೋನಾಲಿ ಕಳೆದ ಎರಡು ವರ್ಷಗಳ ಕೆಲಸವನ್ನು ಬಿಟ್ಟು ಮನೆಯಲ್ಲಿಯೇ ಇದ್ದಳು.
ಬುದ್ಧಿ ಹೇಳಿದ್ದಕ್ಕೆ ಕೊಲೆ:
ಕಳೆದ ಎರಡು ದಿನಗಳ ಹಿಂದೆ ಸೋನಾಲಿಯ ಪುತ್ರ ಯಾವುದೋ ಕಾರಣಕ್ಕೆ ಕೀಟಲೆ ಮಾಡಿದಾಗ ಸೋನಾಲಿ ತಾಯಿ ಬೀವಾಪಾಲ್ ಮೊಮ್ಮಗನಿಗೆ ಬೈದು ಬುದ್ಧಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ಅವರ ಅತ್ತೆ ನಿಮ್ಮ ತಾಯಿಗೆ ಬುದ್ಧಿ ಹೇಳಿ ಮಕ್ಕಳಿಗೆ ಕೆಟ್ಟ ರೀತಿಯಲ್ಲಿ ಬೈಯುವುದನ್ನು ನಿಯಂತ್ರಣ ಮಾಡುವಂತೆ ತಾಕೀತು ಮಾಡಿದ್ದಾರೆ. ಇದರಿಂದ ಮನನೊಂದು ತಾಯಿಗೆ ಬುದ್ಧಿ ಹೇಳಿದ್ದಾಳೆ. ಮೊಮ್ಮಗನಿಗೆ ಬುದ್ಧಿ ಹೇಳುವ ಅಧಿಕಾರವೂ ತನಗಿಲ್ಲವೇ ಎಂದು ತಾಯಿ ಗೋಳಾಡಿದ್ದಾಳೆ. ಇದರಿಂದ ನಾನು ಬದುಕುವುದಿಲ್ಲ ನನ್ನನ್ನು ಸಾಯಿಸಿಬಿಡು ಎಂದು ತಾಯಿ ಮಗಳ ಬಳಿಯೇ ಕೇಳಿಕೊಂಡಿದ್ದಾಳೆ.
ನೆಮ್ಮದಿಯೇ ಹಾಳಾಗಿತ್ತು:
ತಾಯಿಯೇ ಮಗಳ ಬಳಿ ನಿದ್ರೆ ಮಾತ್ರೆ ಕೊಟ್ಟು ಸಾಯಿಸುವಂತೆ ಹೇಳಿದ್ದಳು. ಕೆಲವು ವರ್ಷಗಳ ಹಿಂದೆ ಅಪ್ಪ ತೀರಿಕೊಂಡಿದ್ದಾರೆ. ನೀನು ನನ್ನ ತಂದೆ ಬಳಿ ಹೋಗು ನಾನು ಜೈಲಿಗೆ ಹೋಗ್ತೀನಿ ಎಂದು ಮಗಳು ತಾಯಿಗೆ ಹೇಳಿದ್ದಳು. ಕೊಲೆ ಮಾಡುವ ಮುಂಚೆಯೇ ಈ ಬಗ್ಗೆ ತಾಯಿ ಮಗಳು ಮಾತನಾಡಿಕೊಂಡಿದ್ದರು. ಸೋನಾಲಿ ತಾಯಿ ಮತ್ತು ಅತ್ತೆ ಜಗಳದಿಂದ ಬೇಸತ್ತು ಮಾನಸಿಕವಾಗಿ ಕುಗ್ಗಿ ಹೋಗಿ ಈ ಮಾತನ್ನು ಹೇಳಿದ್ದಳು. ಇನ್ನು ಸೋನಾಲಿ ಮಗನಿಗೂ ಕೂಡ ಮಾನಸಿಕ ತೊಂದರೆ ಕಾಡುತಿತ್ತು. ಇತ್ತ ಮಗನ ಚಿಂತೆ ಇನ್ನೋಂದು ಕಡೆ ಇವರಿಬ್ಬರ ಜಗಳದಿಂದ ಬೇಸತ್ತು ಕೊನೆಗೆ ಕೊಲೆ ಮಾಡಲು ತೀರ್ಮಾನಿಸಿದ್ದಾಳೆ.
ಸೂಟ್ ಕೇಸ್‌ನಲ್ಲಿ ಶವ:
ತಾಯಿಗೆ ನಿನ್ನೆ ಬೆಳಿಗ್ಗೆ ೭ ಗಂಟೆಗೆ ತಾಯಿಗೆ ೨೦ಕ್ಕೂ ಅಧಿಕ ನಿದ್ರೆ ಮಾತ್ರೆಯನ್ನು ಸೋನಾಲಿ ಕೊಟ್ಟಿದ್ದಾಳೆ. ಈ ಎಲ್ಲ ಮಾತ್ರೆಗಳನ್ನು ನುಂಗಿದ ವೃದ್ಧ ತಾಯಿ ಬೀವಾಪಾಲ್ ಬೆಳಗ್ಗೆ ೧೧ ಗಂಟೆಗೆ ವೇಳೆಗೆ ಹೊಟ್ಟೆ ನೋವು ಎಂದು ಚೀರಾಡುತ್ತಿದ್ದಳು. ಇದರಿಂದ ಸುಮ್ಮನೆ ಮನೆಯವರಿಗೆ ತೊಂದರೆ ಆಗುತ್ತದೆಂದು ಆಕೆಯ ಚೀರಾಟ ಯಾರಿಗೂ ಕೇಳಬಾರದೆಂದು ತಾಯಿಯನ್ನು ಸೀರೆಯಿಂದ ಕುತ್ತಿಗೆಗೆ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಬಳಿಕ ತಾಯಿ ಮೃತದೇಹದ ಬಳಿ ಕುಳಿತುಕೊಂಡು ಆಲೋಚನೆ ಮಾಡಿ, ನಂತರ ಕ್ಯಾಬ್ ಮಾಡಿಕೊಂಡು ಶವವನ್ನು ಹೊರಗೆ ಸಾಗಿಸಲು ಯತ್ನಿಸಿದ್ದಾಳೆ. ಆದರೆ, ಇದಕ್ಕೆ ಮನಸ್ಸೊಪ್ಪದೇ ಸುಮಾರು ೧ ಗಂಟೆ ಬಳಿಕ ಸೂಟ್‌ಕೇಸ್‌ನಲ್ಲಿ ತಾಯಿಯ ಮೃತದೇಹವನ್ನು ಇಟ್ಟುಕೊಂಡು ಮೈಕೋಲೇಔಟ್ ಪೊಲೀಸ್ ಠಾಣೆಗೆ ಶವವನ್ನು ತಂದಿದ್ದಾಳೆ.
ಅರೆಸ್ಟ್ ಕರೋ:
ಬಿಳೇಕಹಳ್ಳಿಯ ಫ್ಲ್ಯಾಟ್‌ನಲ್ಲಿ ಸೊನಾಲಿ, ಆಕೆಯ ತಾಯಿ, ಪತಿ, ಸೊನಾಲಿ ಮಗ,ಅತ್ತೆ ಹಾಗೂ ಸೊನಾಲಿ ಸಹೋದರ ವಾಸವಾಗಿದ್ದು, ಪತಿ ಕೆಲಸಕ್ಕೆ ಹೋದಾಗ ಅಮ್ಮನನ್ನು ಕೊಲೆ ಮಾಡಿದರೂ ಮನೆಯಲ್ಲಿ ಯಾರಿಗೂ ವಿಚಾರವನ್ನು ತಿಳಿಸಿಲ್ಲ. ಜೊತೆಗೆ, ತುಂಬು ಕುಟುಂಬದಲ್ಲಿ ಯಾರಿಗೂ ಗೊತ್ತಾಗದಂತೆ ಮೃತದೇಹವನ್ನು ಹೊರತಂದ ಸೊನಾಲಿ ಸೀದಾ ಪೋಲೀಸ್ ಠಾಣೆಗೆ ತಾಯಿ ಮೃತದೇಹವನ್ನು ತಂದು “ಮೇರೆ ಮಾಕೋ ಮೈನೆ ಮಾರ್ ದಿಯಾ ಅರೆಸ್ಟ್ ಕರೋ” ಎಂದು ಪೊಲೀಸರಿಗೆ ಹೇಳಿದ್ದಾಳೆ.
ಇದರಿಂದ ಶಾಕ್ ಆದ ಪೊಲೀಸರು ಸೂಟ್‌ಕೇಸ್ ಕೆಳಗಿಟ್ಟು ತೆಗೆದು ನೋಡಿದಾಗ ಅದರಲ್ಲಿ ವೃದ್ಧೆಯ ಶವವಿತ್ತು. ಇದನ್ನು ನೋಡಿ ದಂಗಾದ ಪೊಲೀಸರು ಸೋನಾಲಿಯ ಗಂಡನಿಗೆ ಕರೆ ಮಾಡಿ ಪೊಲೀಸ್ ಠಾಣೆಗೆ ಕರೆಸಿಕೊಂಡಿದ್ದಾರೆ. ಈಕೆಯ ಕೃತ್ಯದಿಂದ ಗಂಡನಿಗೂ ಶಾಕ್ ಆಗಿದೆ.
ಸೊನಾಲಿ ವಶಕ್ಕೆ:
ಈ ಘಟನೆಯಿಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶವವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಕೊಲೆ ಆರೋಪಿ ಸೋನಾಲಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ದಿನ ಬೆಳಗಾದರೂ ಯಾವುದನ್ನೂ ಮಾತನಾಡದೇ ಮೌನಕ್ಕೆ ಶರಣಾಗಿದ್ದ ಸೋನಾಲಿ ಇಂದು ಬೆಳಗ್ಗೆ ತನ್ನ ತಾಯಿಗೆ ಮುಕ್ತಿ ಕೊಡಿಸಿದ್ದೇನೆ. ನನ್ನನ್ನು ಬಂಧಿಸಿ ಎಂದು ಹೇಳಿದ್ದಾಳೆ. ಇಂದು ಬೆಳಗ್ಗೆ ಸೋನಾಲಿಯಲ್ಲಿ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗಿದ್ದಾರೆ. ಒಟ್ಟಾರೆ, ತುಂಬು ಸಂಸಾರದಲ್ಲಿ ಅತ್ತೆ- ಅಮ್ಮನ ಜಗಳದಿಂದ ನೆಮ್ಮದಿ ಹೋಗಿದ್ದು, ಇದು ಕೊಲೆಯಾಗುವ ಮಟ್ಟಕ್ಕೆ ವಿಕೋಪಕ್ಕೆ ಹೋಗಿದ್ದು ದುರಂತವೇ ಸರಿ!