ತಾಯಿ ಎದೆ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ

ಬೀದರ್:ಆ.4: ತಾಯಿಯ ಎದೆ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಇರುತ್ತದೆ ಎಂದು ಇಂಡಿಯನ್ ಅಕಾಡೆಮಿ ಆಫ್ ಪೆಡಿಯಾಟ್ರಿಕ್ಸ್ ಬೀದರ್ ವಿಭಾಗದ ಅಧ್ಯಕ್ಷೆ ಡಾ. ಶಾಂತಲಾ ಕೌಜಲಗಿ ಹೇಳಿದರು.

ಇಲ್ಲಿಯ ಬ್ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಹಾಗೂ ಇಂಡಿಯನ್ ಅಕಾಡೆಮಿ ಆಫ್ ಪೆಡಿಯಾಟ್ರಿಕ್ಸ್ ಬೀದರ್ ವಿಭಾಗದ ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹ ಅಂಗವಾಗಿ ಪ್ರಸೂತಿಯಾದ ತಾಯಂದಿರಿಗೆ ಆಯೋಜಿಸಿದ್ದ ಸ್ತನ್ಯಪಾನ ಮಹತ್ವ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಶೋಧನೆಗಳ ಪ್ರಕಾರ ತಾಯಿ ಎದೆ ಹಾಲು ಚೆನ್ನಾಗಿ ಕುಡಿಯದ ಮಕ್ಕಳಿಗೆ ಹೃದಯ ರೋಗ, ಕ್ಷಯ ರೋಗ, ಸಕ್ಕರೆ ಕಾಯಿಲೆ, ಕ್ಯಾನ್ಸರ್‍ನಂತಹ ಕಾಯಿಲೆಗಳು ಬೇಗ ಬರುವ ಸಾಧ್ಯತೆ ಹೆಚ್ಚು ಎಂದು ಹೇಳಿದರು.

ತಾಯಿ ಎದೆ ಹಾಲು ಅಮೃತಕ್ಕೆ ಸಮಾನ. ಕಾರಣ ಸ್ವಾಭಾವಿಕ ಪ್ರಸೂತಿಯಾದ ಮಗುವಿಗೆ ಜನಿಸಿದ ಒಂದು ಗಂಟೆ, ಸಿಸೇರಿಯನ್ ಮೂಲಕ ಜನಿಸಿದ ಮಗುವಿಗೆ ನಾಲ್ಕು ಗಂಟೆಗಳ ಒಳಗೆ ಎದೆ ಹಾಲು ಉಣಿಸಬೇಕು. ಪ್ರಸೂತಿಯಾದ ಮೂರು ದಿನ ಹಾಲಿನಲ್ಲಿ ಎಲ್ಲ ಬಗೆಯ ಪೋಷಕಾಂಶಗಳು ಇರುವುದರಿಂದ ತಪ್ಪದೇ ಎದೆ ಹಾಲು ಕುಡಿಸಬೇಕು ಎಂದು ತಿಳಿಸಿದರು.

ಆರು ತಿಂಗಳ ವರೆಗೆ ಮಗುವಿಗೆ ತಾಯಿ ಎದೆ ಹಾಲು ಮಾತ್ರ ಕೊಡಬೇಕು. ನಂತರ ಎದೆ ಹಾಲಿನ ಜತೆ ದ್ರವ ಪದಾರ್ಥಗಳನ್ನು ಕೊಡಬಹುದು. ಮಗುವಿಗೆ ಎರಡು ವರ್ಷ ತುಂಬುವವರೆಗೂ ಎದು ಹಾಲು ಉಣಿಸಬೇಕು ಎಂದು ಹೇಳಿದರು.

ಮಕ್ಕಳ ಆರೋಗ್ಯಪೂರ್ಣ ಬೆಳವಣಿಗೆಯಲ್ಲಿ ತಾಯಿ ಎದೆ ಹಾಲಿನ ಮಹತ್ವ ಬಹಳ ಇದೆ ಎಂದು ಮಕ್ಕಳ ತಜ್ಞ ಡಾ. ಶರಣ ಬುಳ್ಳಾ ನುಡಿದರು.

ತಾಯಂದಿರಿಗೆ ಉಪಹಾರ ವಿತರಿಸಲಾಯಿತು. ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಉಪಾಧ್ಯಕ್ಷ ಶಿವಕುಮಾರ ಪಾಖಾಲ್, ಕಾರ್ಯದರ್ಶಿ ಡಾ. ರಿತೇಶ ಸುಲೆಗಾಂವ್, ನಿಕಟಪೂರ್ವ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ, ಬ್ರಿಮ್ಸ್ ಆಸ್ಪತ್ರೆ ವೈದ್ಯರು, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.