ತಾಯಿ ಎದೆಹಾಲು ಮಗುವಿಗೆ ಅಮೃತ ಸ್ತ್ರೀರೋಗ ತಜ್ಞೆ -ಡಾ.ಅಶ್ವಿನಿ ಉಭಾಳೆ

ದೇವದುರ್ಗ.ನ.೧೮- ತಾಯಿ ಎದೆಹಾಲು ಮಗುವಿಗೆ ಅಮೃತಕ್ಕೆ ಸಮಾನವಾಗಿದ್ದು, ಮಗು ಜನಿಸಿದ ಒಂದು ಗಂಟೆಯೊಳಗೆ ಸ್ತನ್ಯಪಾನ ಮಾಡಬೇಕು ಎಂದು ಸ್ತ್ರೀರೋಗ ತಜ್ಞೆ ಡಾ.ಅಶ್ಚಿನಿ ಉಭಾಳೆ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಆಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ತಾಯಿ ಮಗುವಿಗೆ ದಿನಕ್ಕೆ ಕನಿಷ್ಠ ಎಂಟು ಬಾರಿ ಹಾಲುಣಿಸಬೇಕು. ಹುಟ್ಟಿದ ಒಂದು ಗಂಟೆಯೊಳಗೆ ಮಗುವಿಗೆ ಹಾಲುಣಿಸಲು ಪ್ರಾರಂಭಿಸಿ ಸತತ ೬ತಿಂಗಳವರಗೆ ಕೇವಲ ಎದೆ ಹಾಲನ್ನು ಮಾತ್ರ ನೀಡಬೇಕು. ಸ್ತನ್ಯಪಾನದಲ್ಲಿ ಶಿಶುವಿನ ಸದೃಢ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳು, ವಿಟಮಿನ್, ಖನಿಜಾಂಶಗಳು ಅಡಕವಾಗಿವೆ. ಸ್ತನ್ಯಪಾನ ನವಜಾತ ಶಿಶುಗಳನ್ನು ಅನಾರೋಗ್ಯದಿಂದ ರಕ್ಷಿಸುತ್ತದೆ.
ಮಗುವಿಗೆ ಹಾಲುಣಿಸುವುದರಿಂದ ತಾಯಿಗೆ ಕಾಡುವ ಖಿನ್ನತೆ ಕಡಿಮೆ ಮಾಡುತ್ತದೆ. ಸ್ತನ್ಯ ಹಾಗೂ ಅಂಡಾಶಯದ ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ. ದೇಹದ ತೂಕ ಇಳಿಸುವುದರಲ್ಲಿ ಸಹಕಾರಿಯಾಗಲಿದೆ. ಅಲ್ಲದೆ ಹೃದಯ ಆರೋಗ್ಯ ಬರುವುದು ತೀರ ಕಡಿಮೆ. ಹೀಗಾಗಿ ತಾಯಿ ಮಗುವಿಗೆ ತಪ್ಪದೆ ಹಾಲುಣಿಸಬೇಕು ಎಂದು ಹೇಳಿದರು.
ಆಯುಷ್ಯ ವೈದ್ಯಾಧಿಕಾರಿ ಡಾ.ನಿರ್ಮಲಾದೇವಿ ಮಾತನಾಡಿ, ಸ್ತನ್ಯಪಾನದಿಂದ ಮಗುವಿಗೆ ಉತ್ತಮ ಪೌಷ್ಠಿಕಾಂಶ ಲಭಿಸಿ ಹೆಚ್ಚು ಆರೋಗ್ಯವಾಗಿರುತ್ತದೆ. ಬಾಲ್ಯದ ರೋಗಗಳಿಗೆ ಪ್ರತಿರಕ್ಷನೇ ನೀಡುತ್ತದೆ. ಉನ್ನತಮಟ್ಟದ ದೈಹಿಕ ಮತ್ತು ಪೌಷ್ಠಿಕ ಶಕ್ತಿ ಬೆಳೆಸುತ್ತದೆ ಎಂದರು.
ಈಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಚನ್ನಬಸಯ್ಯ ಹಿರೇಮಠ, ನೌಕರರಾದ ನಾಗರಾಜ, ಇಮಾಮ ಇಟಗಿ, ನಾಗರಾಜ, ರೋಹಿತ, ಮನೋಜ, ಕುಟುಂಬ ಕಲ್ಯಾಣ ಕೌನ್ಸಲರ್ ರಂಗಮ್ಮ, ದೀಪಿಕಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಇತರರಿದ್ದರು.