
ದಾವಣಗೆರೆ; ಆ. 4 : ತಾಯಿಯ ಎದೆಹಾಲು ಮಗುವಿಗೆ ಮೊದಲ ಲಸಿಕೆ ಮತ್ತು ಸುರಕ್ಷಿತವಾದದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ರಾಜ್‍ಕುಮಾರ್ ರಾಠೋಡ್ ತಿಳಿಸಿದರು. ನಗರದ ಹೊಂಡದ ಸರ್ಕಲ್‍ನಲ್ಲಿರುವ ಶ್ರೀ ದುರ್ಗಾಂಬಿಕಾ ಪ್ರೌಢಶಾಲೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಮಗು ಜನಿಸಿದ 1 ಗಂಟೆಯೊಳಗೆ ಸ್ತನ್ಯಪಾನ ಮಾಡಿಸುವುದರಿಂದ ಶಿಶು ಮರಣವನ್ನು ಕಡಿಮೆ ಮಾಡಬಹುದು. ಮೊದಲ 6 ತಿಂಗಳು ಮಗುವಿಗೆ ಕೇವಲ ಎದೆ ಹಾಲನ್ನು ಮಾತ್ರ ನೀಡಬೇಕು, ನಂತರ ಪೂರಕ ಪೌಷ್ಠಿಕ ಆಹಾರವನ್ನು ನೀಡಬೇಕು ಎಂದು ತಿಳಿಸಿದರು.ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಭಿಕುಮಾರ್.ಜಿ.ಎಸ್ ಮಾತನಾಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಆಗಸ್ಟ್-01 ರಿಂದ ಆಗಸ್ಟ್-07 ರವರೆಗೆ ಕಡ್ಡಾಯವಾಗಿ ಅಂಗನವಾಡಿ ಕೇಂದ್ರಗಳಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಗರ್ಭಿಣಿ ಮತ್ತು ಬಾಣಂತಿಯರಿಗೆ ಸ್ತನ್ಯಪಾನದ ಉದ್ದೇಶ ಹಾಗೂ ಮಹತ್ವದ ಬಗ್ಗೆ ತಿಳಿಸಬೇಕು ಎಂದು ಹೇಳಿದರು.ಸಹಪ್ರಾಧ್ಯಾಪಕರು ಹಾಗೂ ಮಕ್ಕಳ ತಜÐರಾದ ಡಾ. ಗೌಳಿ ಚಂದ್ರಶೇಖರ್ ಮಾತನಾಡಿ ಎರಡು ವರ್ಷದವರೆಗೂ ಮಕ್ಕಳಿಗೆ ಸಂಪೂರ್ಣ ಸ್ತನ್ಯಪಾನ ಮಾಡಿಸುವುದರಿಂದ. ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಸೋಂಕುಗಳಿಂದ ರಕ್ಷಣೆ ನೀಡುತ್ತದೆ. ಸ್ತನ್ಯಪಾನ ಮಾಡಿಸುವುದರಿಂದ ತಾಯಿ-ಮಗು ನಡುವೆ ಬಾಂಧವ್ಯ ಹೆಚ್ಚುತ್ತದೆ. ತಾಯಿಯ ಎದೆ ಹಾಲಿನಷ್ಟು ಪೋಷಕಾಂಶ ಭರಿತ ಆಹಾರ ಭೂಮಿಯ ಮೇಲೆ ಯಾವುದೂ ಇಲ್ಲವೆಂದು ಹೇಳಿದರು.ತಾಲ್ಲೂಕು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ನೇತ್ರಾವತಿ ಮತ್ತು ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿಯರು ಹಾಗೂ ನಗರ ಪ್ರದೇಶದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಹೊಂಡದ ಸರ್ಕಲ್ ಸುತ್ತಮುತ್ತಲಿನ ಗರ್ಭಿಣಿ ಹಾಗೂ ಬಾಣಂತಿಯರು ಉಪಸ್ಥಿತರಿದ್ದರು