ತಾಯಿಗೆ ಏನು ಕೊಡಬೇಕು ಎಂಬುದು ಗೊತ್ತು

ಡಿಕೆಶಿ ಭಾವುಕ
ಬೆಂಗಳೂರು,ಮೇ೧೬:ಕಾಂಗ್ರೆಸ್ ಪಕ್ಷ ನನ್ನ ಪಾಲಿನ ದೇವರು, ದೇವಾಲಯ ಮತ್ತು ನನಗೆ ತಾಯಿ ಇದ್ದಂತೆ, ದೇವರು ಮತ್ತು ತಾಯಿಗೆ ಮಕ್ಕಳಿಗೆ ಏನು ಕೊಡಬೇಕು ಎಂಬುದು ಗೊತ್ತಿರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾವುಕರಾಗಿ ಹೇಳಿದರು.
ನೂತನ ಸಿಎಂ ಆಯ್ಕೆಯ ಬಗ್ಗೆ ಚರ್ಚಿಸಲು ವರಿಷ್ಠರ ಬುಲಾವ್ ಮೇರೆಗೆ ದೆಹಲಿಗೆ ತೆರಳುವ ಮುನ್ನ ಬೆಂಗಳೂರಿನ ಸದಾಶಿವ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನನ್ನ ದೇವರನ್ನು ಭೇಟಿ ಮಾಡಲು ದೇವಾಲಯಕ್ಕೆ ಹೋಗುತ್ತಿದ್ದೇನೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ನನ್ನನ್ನು ಒಬ್ಬನೇ ದೆಹಲಿಗೆ ಬರುವಂತೆ ಹೇಳಿದ್ದಾರೆ. ಹೀಗಾಗಿ ನಾನು ಒಬ್ಬನೇ ಹೋಗುತ್ತಿದ್ದೇನೆ ಎಂದರು.
ಮಕ್ಕಳಿಗೆ ಏನು ಕೊಡಬೇಕು ಎಂಬುದು ದೇವರು ಮತ್ತು ತಾಯಿಗೆ ಗೊತ್ತಿರುತ್ತದೆ. ಪಕ್ಷ ನನಗೆ ದೇವರು ಮತ್ತು ತಾಯಿ ಇದ್ದಂತೆ ಎಂದು ಅವರು ಹೇಳಿದರು.
ನನ್ನ ಆರೋಗ್ಯ ಉತ್ತಮವಾಗಿದೆ. ಹಾಗಾಗಿ, ದೆಹಲಿಗೆ ಹೋಗುತ್ತಿದ್ದೇನೆ. ಜನ ನಮಗೆ ನೀಡಿರುವ ಆರ್ಶೀವಾದ, ನಮ್ಮ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಂಡು ಹೋಗಲು ನಾವು ಶ್ರಮಿಸಬೇಕು ಎಂದರು.
ಕಾನೂನು ಬದ್ಧವಾಗಿ ದೇಶದ ಸಂವಿಧಾನವನ್ನು ಉಳಿಸಲು, ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಲು ರಾಜ್ಯದ ಜನತೆ ಹಾಗೂ ತಾಯಿ ಚಾಮುಂಡೇಶ್ವರಿ ಆರ್ಶೀವಾದ ಸಿಕ್ಕದೆ ಎಂದರು.
ಹೈಕಮಾಂಡ್ ಬಳಿ ಮುಖ್ಯಮಂತ್ರಿ ಸ್ಥಾನ ಕೇಳುತ್ತೀರಾ ಎಂಬ ಪ್ರಶ್ನೆಗೆ ನಾನು ನನ್ನ ಕರ್ತವ್ಯ ಮಾಡಿದ್ದೇನೆ. ೧೩೫ ಸ್ಥಾನಗಳನ್ನು ಗೆದ್ದು ಕೊಟ್ಟಿದ್ದೇನೆ ಎಂದಷ್ಟೇ ಅವರು ಉತ್ತರಿಸಿದರು.

ಬೆನ್ನಿಗೆ ಚೂರಿ ಹಾಕಲ್ಲ
ನಾನು ಬೆನ್ನಿಗೆ ಚೂರಿ ಹಾಕುವುದಿಲ್ಲ. ಬ್ಲ್ಯಾಕ್‌ಮೇಲ್ ಮಾಡುವುದೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಆಂಗ್ಲ ವಾಹಿನಿಯೊಂದಕ್ಕೆ ಮಾತನಾಡಿದ ಅವರು, ನಮ್ಮದು ಒಗ್ಗಟ್ಟಿನ ಮನೆ, ನಮ್ಮ ಸಂಖ್ಯೆ ೧೩೫, ಯಾರೊಬ್ಬರನ್ನು ಒಡೆಯುವ ಕೆಲಸ ನಾನು ಮಾಡುವುದಿಲ್ಲ. ಇದು ಅವರಿಗೆ ಇಷ್ಟವಾಗುತ್ತದೆಯೋ ಇಲ್ಲವೋ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ನಾನು ಜವಾಬ್ದಾರಿಯುತ ನಾಯಕ ನಾನು ಬೆನ್ನಿಗೆ ಚೂರಿ ಹಾಕುವುದಿಲ್ಲ. ಬ್ಲ್ಯಾಕ್‌ಮೇಲ್ ಮಾಡುವುದೂ ಇಲ್ಲ ಎಂದು ಅವರು ಹೇಳಿದ್ದಾರೆ.