ತಾಯಿಂದ ಬೇರ್ಪಟ್ಟ ಹುಲಿಮರಿಗಳ ರಕ್ಷಣೆ

ಮೈಸೂರು:ಮಾ:29: ಬಂಡಿಪುರದಲ್ಲಿ ತಾಯಿಯಿಂದ ಬೇರ್ಪಟಿದ್ದ ಹುಲಿ ಮರಿಗಳನ್ನು ಮೈಸೂರು ಮೃಗಾಲಯಕ್ಕೆ ಕರೆತರಲಾಗಿದೆ.
ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿನ ವ್ಯಾಪ್ತಿಯಲ್ಲಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಳಿ ತಾಯಿಯಿಂದ ಬೇರ್ಪಟ್ಟಿದ್ದ ಮೂರು ಹುಲಿ ಮರಿಗಳು ಪತ್ತೆಯಾಗಿದ್ದು ಅವುಗಳಲ್ಲಿ ಒಂದು ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಎರಡು ಹುಲಿ ಮರಿಗಳನ್ನು ಮೈಸೂರಿನ ಮೃಗಾಲಯಕ್ಕೆ ಕರೆ ತರಲಾಗಿತ್ತು. ಅದರಲ್ಲಿ 1 ಮರಿ ಮೃತಪಟ್ಟಿದ್ದು ಮತ್ತೊಂದು ಮರಿಗೆ ಮೃಗಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ತಿಂಗಳ ಮರಿಗಳನ್ನು ತಾಯಿ ಯಾವ ಕಾರಣಕ್ಕೆ ಬಿಟ್ಟು ತೆರಳಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ ಹುಲಿ ಮರಿಗಳ ಮೈ ಮೇಲೆ ಮಿತಿಮೀರಿದ ಪ್ರಮಾಣದಲ್ಲಿ ಟಿಕ್ಸ್ ಅಂದರೆ ಉಣ್ಣೆ ಕಂಡುಬಂದಿದ್ದು ಆ ಕಾರಣದಿಂದ ತಾಯಿಯೇ ಮರಿಗಳನ್ನು ಬೇರ್ಪಡಿಸಿ ತೆರಳಿದೆ ಎಂದು ಅನುಮಾನಿಸಲಾಗಿದೆ.ತಾಯಿ ಹುಲಿ ಸ್ಥಳದಿಂದ ತೆರಳುವಾಗ ಮರಿಯೊಂದನ್ನು ಕರೆದುಕೊಂಡು ಹೋಗಿರುವುದು ಪತ್ತೆಯಾಗಿದೆ. ಕಳೆದ ಒಂದು ವಾರದ ಹಿಂದೆ ಗಸ್ತಿನಲ್ಲಿದ್ದ ಸಿಬ್ಬಂದಿಗೆ ಮರಿಗಳು ಕಾಣಿಸಿಕೊಂಡಿದ್ದು ತಾಯಿ ಇಲ್ಲದಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದ ಅರಣ್ಯ ಸಿಬ್ಬಂದಿಗೆ ಇಂದು ಬೆಳಿಗ್ಗೆ ನಿತ್ರಾಣ ಸ್ಥಿತಿಯಲ್ಲಿ ಮರಿಯೊಂದು ಪೆÇದೆಯ ಬಳಿ ಇರುವುದು ಕಂಡುಬಂದಿತು. ಸ್ಥಳಕ್ಕೆ ತೆರಳಿದ ಅರಣ್ಯ ಸಿಬ್ಬಂದಿ ನಿತ್ರಾಣ ಸ್ಥಿತಿಯಲ್ಲಿದ್ದ ಹುಲಿಮರಿಗೆ ನೀರು ಕುಡಿಸಿ ಉಪಚರಿಸಲು ಮುಂದಾದರು.ಕೆಲವೇ ಸಮಯದಲ್ಲಿ ಆ ಹುಲಿಮರಿ ಮೃತಪಟ್ಟಿತು. ಸಮೀಪದಲ್ಲಿಯೇ ಮತ್ತೆರಡು ಹುಲಿ ಮರಿಗಳಿರುವುದು ಕಂಡುಬಂದಿತು. ಆ ಹುಲಿಮರಿಗಳನ್ನು ರಕ್ಷಿಸಿ ಅರಣ್ಯ ಸಿಬ್ಬಂದಿ ಎಸಿಎಫ್ ರವಿಕುಮಾರ್ ಅವರೊಂದಿಗೆ ಮೈಸೂರು ಮೃಗಾಲಯಕ್ಕೆ ಸಂಜೆ ವೇಳೆಗೆ ಕರೆತರಲಾಯಿತು.ಚಿಕಿತ್ಸೆ ನೀಡಲು ಆರಂಭಿಸುತ್ತಿದ್ದಂತೆಯೇ ಒಂದು ಹುಲಿಮರಿ ಸಾವನ್ನಪ್ಪಿದ್ದು ಮತ್ತೊಂದಕ್ಕೆ ಡ್ರಿಪ್ ಹಾಕಿ ಚಿಕಿತ್ಸೆ ನೀಡಲಾಗುತ್ತಿದೆ.
ತಾಯಿಯೊಂದಿಗೆ ತೆರಳಿರುವ ಮತ್ತೊಂದು ಮರಿಯನ್ನು ಹುಡುಕುವ ಕಾರ್ಯಾಚರಣೆ ಮುಂದುವರೆಸಲಾಗಿದೆ.ತಾಯಿ ಹುಲಿ ಗಾಯಗೊಂಡಿರುವ ಶಂಕೆಯೂ ವ್ಯಕ್ತವಾಗಿದ್ದು ಬೇಟೆಯಾಡಲು ಸಾಧ್ಯವಾಗದೆ ಹುಲಿ ಮರಿಗಳು ಹಸಿವಿನಿಂದ ಕಂಗೆಟ್ಟಿವೆ ಎನ್ನುವ ಶಂಕೆಯನ್ನು ಅರಣ್ಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಇದನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಇಂದು ರಾತ್ರಿ ಹುಲಿಮರಿ ದೊರೆತ ಸ್ಥಳದ ಬಳಿ ಬೇಟೆಯೊಂದನ್ನು ಇಟ್ಟು ಹುಲಿಯನ್ನು ಗಮನಿಸಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.ಸ್ಥಳಕ್ಕೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ನಟೇಶ್ ಹೆಡಿಯಾಲ ಎಸಿಎಫ್ ರವಿಕುಮಾರ್ ಆರ್‍ಎಫ್‍ಒ ಗೀತಾ ನಾಯಕ್, ವನ್ಯಜೀವಿ ಪರಿಪಾಲಕರಾದ ಕೃತಿಕಾ ಆಲನಹಳ್ಳಿ ಸೇರಿದಂತೆ ಇನ್ನಿತರರು ಭೇಟಿ ನೀಡಿ ಪರಿಶೀಲಿಸಿದರು.
ಸ್ಥಳದಲ್ಲಿ ಮೃತಪಟ್ಟಿರುವ ಹುಲಿ ಮರಿ ಹಾಗೂ ಮೃಗಾಲಯದಲ್ಲಿ ಮೃತಪಟ್ಟಿರುವ ಹುಲಿಮರಿಗಳೆರೆಡೂ ಹೆಣ್ಣು ಮರಿಗಳಾಗಿವೆ. ಇನ್ನು ಮೃಗಾಯಲದಲ್ಲಿ ಗಂಡು ಮರಿಗೆ ಚಿಕಿತ್ಸೆ ನೀಡಲಾಗುತ್ತಿದೆ.