
ತುಮಕೂರು, ಆ. ೯- ಮಹಿಳೆಯರಿಗೆ ಸರಗಳ್ಳತನ, ಆತ್ಮರಕ್ಷಣೆ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಅವರಲ್ಲಿ ಅರಿವು ಮೂಡಿಸುತ್ತಿರುವುದು ಉತ್ತಮ ಕಾರ್ಯ ಎಂದು ಅಖಿಲ ಕುಂಚಿಟಿಗ ಮಹಾಮಂಡಲದ ಅಧ್ಯಕ್ಷ ರಂಗಹನುಮಯ್ಯ ಹೇಳಿದರು.
ನಗರದ ಕುಂಚಶ್ರೀ ಮಹಿಳಾ ಬಳಗದ ವತಿಯಿಂದ ಏರ್ಪಡಿಸಿದ್ದ ಮಹಿಳೆಯರಿಗೆ ಆತ್ಮರಕ್ಷಣೆ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎನ್‌ಇಪಿಎಸ್ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ವಿನ್ಸೆಂಟ್ ಮಾತನಾಡಿ, ಮಹಿಳೆಯರು ಹೆಚ್ಚು ಒಡವೆಗಳನ್ನು ಮೇಲೆ ಕಾಣುವ ಹಾಗೆ ಧರಿಸಬಾರದು. ಒಂಟಿಯಾಗಿ ಓಡಾಡುವಾಗ ಆಭರಣ ಧರಿಸಿದರೆ ಎಚ್ಚರಿಕೆಯಿಂದ ಇರಬೇಕು. ತಾಯಂದಿರು ಮಕ್ಕಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು. ಹೈಸ್ಕೂಲ್ ಹಾಗೂ ಕಾಲೇಜು ಮಕ್ಕಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗಿಯಾಗುತ್ತಿದ್ದಾರೆ. ಮಕ್ಕಳಿಗೆ ಹೆಚ್ಚು ಪಾಕೆಟ್ ಮನಿ ಮತ್ತು ಮೊಬೈಲ್ ಕೊಡಬೇಡಿ. ನಿಮ್ಮ ಮಕ್ಕಳು ಓದುತ್ತಿರುವ ಶಾಲಾ-ಕಾಲೇಜುಗಳಿಗೆ ಅನಿರೀಕ್ಷಿತ ಭೇಟಿ ನೀಡಿ ನಿಮ್ಮ ಮಕ್ಕಳ ಬಗ್ಗೆ ವಿಚಾರಿಸಿ ಮೊಬೈಲ್‌ಗಳಿಗೆ ಬರುವ ಯಾವುದೇ ಸಂದೇಶಗಳಿಗೆ ಉತ್ತರ ನೀಡಬೇಡಿ. ಮನೆಯಲ್ಲಿರುವಾಗ ತುಂಬಾ ಎಚ್ಚರಿಕೆಯಿಂದ ಇರಿ ತೊಂದರೆಯಾದಾಗ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿ ಎಂದು ಹಲವು ಘಟನೆಗಳ ಉದಾಹರಣೆ ಸಮೇತ ವಿವರಿಸಿದರು.
ಆರಕ್ಷಕರಾದ ರೇಖಾಂಜಲಿ ಮಾತನಾಡಿ, ಸರ ಕೀಳುವಾಗ ಧೈರ್ಯಗೆಡದೆ ಯಾವ ರೀತಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ತಂಡದ ನಂದಿನಿ ಅವರೊಂದಿಗೆ ಪ್ರಾಕ್ಷಿಕ ಪ್ರಯೋಗದ ಮೂಲಕ ಮಾಡಿ ತೋರಿಸಿದರು. ಇದೇ ಸಂದರ್ಭದಲ್ಲಿ ಸರಗಳ್ಳನನ್ನು ಹಿಡಿದುಕೊಟ್ಟ ತೇಜು ಶಿವಕುಮಾರ್ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಚಶ್ರೀ ಮಹಿಳಾ ಬಳಗದ ಅಧ್ಯಕ್ಷೆ ಲಲಿತಾ ಮಲ್ಲಪ್ಪ ವಹಿಸಿದ್ದರು. ಪದಾಧಿಕಾರಿಗಳಾದ ಶೈಲಜಾ, ಲಕ್ಷ್ಮಿ, ಪುಷ್ಪಲತಾ, ಭಾಗ್ಯ, ನಳಿನಾ, ತ್ರೀವೇಣಿ, ಉಮಾದೇವಿ ಮತ್ತಿತರರು ಉಪಸ್ಥಿತರಿದ್ದರು.
ಕ್ಯಾತ್ಯಾಯಿನಿ ಪ್ರಾರ್ಥಿಸಿದರು. ರತ್ನ ಸ್ವಾಗತಿಸಿದರು. ಸಾವಿತ್ರಿ ವಂದಿಸಿದರು.